Sunday, April 27, 2014

ದೇವರು ಭೂಮಿಗೆ ಕಳಿಸಿಬಿಟ್ಟ...

ಇನ್ನೂ ನಾನಾಗ ಭೂಮಿಗೆ ಬಂದಿರಲೇ ಇಲ್ಲ. ದೇವರ ಬಳಿಯಲ್ಲೇ ಖುಷಿಯಾಗಿದ್ದೆ. ಭೂಮಿಯ ಮೇಲಿನ ಯಾವ ಬಂಧಗಳೂ, ಸಂಬಂಧಗಳೂ ನನಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ದೇವರು ನನ್ನ ಬಳಿಗೆ ನೀನು ಭೂಮಿಗೆ ಹೋಗು , ಹೊಸ ರೂಪ ಕೊಟ್ಟು ನಿನ್ನನ್ನು ಸೃಷ್ಟಿಸುತ್ತೇನೆ ಎಂದ. ಊಹೂಂ ಜೋರಾಗಿ ಅಳುವುದೊಂದೇ ನನ್ನ ಕೆಲಸ ಆಗ. ಇಲ್ಲ ಸ್ವರ್ಗವನ್ನು ಬಿಟ್ಟು ನಾನು ಹೋಗಲಾರೆ ಎಂದು. ದೇವರು ನಗುತ್ತ ನಗುತ್ತ ಪುಟ್ಟಿ...ನೀನು ಹೋಗಲೇಬೇಕು ಎಂದ. ದೇವರೇ ನಿನ್ನನ್ನು ಬಿಟ್ಟು ನಾನು ಭೂಮಿಗೆ ಹೋದರೆ ಅಲ್ಲಿ ನನ್ನನ್ಯಾರು ನೋಡ್ಕೋಳ್ತಾರೆ ? ಎಂಬ ನನ್ನ ಪ್ರಶ್ನೆಗೆ, ಸಂಬಂಧವೆಂಬ ಬಂಧನದಲ್ಲಿ ನೀನು ಸೇರಿ ಹೋಗ್ತೀಯಾ.ನಿನಗೆ ಅಲ್ಲಿರಲು ಇಷ್ಟವಾಗದಿದ್ದರೆ ನಾ ನಿನ್ನನ್ನು ಮತ್ತೆ ವಾಪಸ್ ಕರೆದುಕೊಳ್ಳುತ್ತೇನೆ ಎಂದ.

ಇಷ್ಟವಿಲ್ಲದ ಭೂಮಿಗೆ ನಾನೊಬ್ಬಳೇ ಬಂದೆ. ಎಲ್ಲರೂ ಅಪರಿಚಿತರೆಂಬ ಭಾವನೆಯಲ್ಲಿ. ಇಷ್ಟು ದಿನ ದೇವರೇ ನನ್ನನ್ನು ನೋಡ್ಕೊಳ್ತಿದ್ದರು.. ಇನ್ಮುಂದೆ ಯಾರು ನೋಡಿಕೊಳ್ಳುತ್ತಾರೆ ಎಂದು ಯೋಚಿಸುತ್ತಿದ್ದೆ. ನಾ ಹುಟ್ಟಿದಾಗ ಎಲ್ಲರೂ ಸಂಭ್ರಮಿಸಿದರು. ಮನೆಯ ಮುದ್ದಿನ ಮಗಳಿವಳು ಎಂಬ ಖುಷಿಯ ಭಾವದಲ್ಲಿ.. ಬೆಳೆಯುತ್ತ ಬೆಳೆಯುತ್ತ ಪ್ರೀತಿಯ ವೃತ್ತದಲ್ಲಿ ಸೇರಿ ಹೋದೆ. ಊಹಿಸಿರದಕ್ಕಿಂತಲೂ ಬದುಕು ಸ್ಪುಟವಾಗಿ ಕಾಣಿಸುತ್ತಿತ್ತು. ಅಪ್ಪನ ಬುದ್ದಿ ಮಾತುಗಳೆಲ್ಲಾ ಹೊಸತನ ಹೊಸರೂಪ ಕೊಟ್ಟಿತು.. ತನ್ನನ್ನು ತಾನು ಪ್ರೀತಿಸುವುದಕ್ಕಿಂತಲೂ ಹೆಚ್ಚು ನನ್ನನ್ನೇ ಪ್ರೀತಿಸುವ ಅಮ್ಮನೆಂಬ ಪ್ರೀತಿಯ ಹೂವನ್ನು ಮುಡಿಗೇರಿಸಿಕೊಂಡೆ. ಎಂದಿಗೂ ಬಾಡದ ಹೂವೆಂದು ತಿಳಿದು..ಸಂಬಂಧಗಳೇ ಬದುಕೆಂಬ ಪಾಠವನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತ ಇಲ್ಲಿಯವರೆಗೆ ಬಂದಿದ್ದೇನೆ.

ಇಂದಿಗೂ ದೇವರಿಗೆ ಥ್ಯಾಂಕ್ಸ್ ಹೇಳುತ್ತ ಬಂದಿದ್ದೇನೆ..ನನ್ನನ್ನು ಭೂಮಿಗೆ ಕಳುಹಿಸಿದ್ದಕ್ಕೆ. ಸ್ವರ್ಗಕ್ಕಿಂತಲೂ ಹೆಚ್ಚು ಖುಷಿಯನ್ನು ಮನೆಯಲ್ಲಿಯೇ ಕರುಣಿಸಿದ್ದಕ್ಕೆ. ದೇವರಿಗಿಂತಲೂ ಹೆಚ್ಚೆಂಬ ಅಮ್ಮನನ್ನು ಬದುಕಾಗಿಸಿದ್ದಕ್ಕೆ..ಪ್ರೀತಿ ಎಂಬ ಪದಕ್ಕೆ ಹಲವಾರು ಅರ್ಥವನ್ನು ತೋರಿಸಿದ್ದಕ್ಕೆ..ಸ್ವರ್ಗವೆಂಬ ಪದಕ್ಕೆ ಅರ್ಥ ಸಿಕ್ಕಿದ್ದು ಭೂಮಿಯಲ್ಲಿಯೇ.. ಇನ್ಯಾವತ್ತಾದರೂ ದೇವರು ನನ್ನ ಬಳಿ ಬಂದು ಸ್ವರ್ಗಕ್ಕೆ ಹೋಗೋಣವೆಂದರೆ ನಾನಂತೂ ಹೋಗಲಾರೆ. ದೇವರೇ ಈ ಬದುಕಿನಲ್ಲಿ ನನ್ನನ್ನು ಶಾಶ್ವತವಾಗಿ ಇರಿಸಿಬಿಡುವೆಯಾ? ಎಂದರೆ ಅವನಲ್ಲಿ ಉತ್ತರವೇ ಇಲ್ಲ. ದೇವರಿಗಿಂತಲೂ ಹತ್ತಿರವಾಗಿಬಿಟ್ಟಳು ಅಮ್ಮ. ನಗುವುದೊಂದನ್ನು ಮಾತ್ರ ಕಲಿಸಿಕೊಟ್ಟಳು. ದೇವರು ನನ್ನನ್ನು ಭೂಮಿಗೆ ಕಳುಹಿಸಿದ್ದೇನೋ ನಿಜ. ಆದರೆ ಅಮ್ಮ ಮಾತ್ರ ಎಂದಿಗೂ ನನ್ನನ್ನು ಹಿಂತಿರುಗಿ ದೇವರ ಬಳಿ ಕಳುಹಿಸಲು ಇಷ್ಟಪಡಲಾರಳು ಎಂಬುದು ನೂರಕ್ಕೆ ಸಾವಿರದಷ್ಟು ನಿಜ. .ಪ್ರತೀ ದಿನಗಳನ್ನು ಕಳೆಯುವಾಗ ಅನಿಸುವುದೆಂದರೆ ಮತ್ತಿನ್ನೆಂದೂ ದೇವರ ಬಳಿ ಹೋಗಬಾರದೆಂದು... ದೇವರಿಗಿಂತ ಭೂಮಿಯ ಬಂಧಗಳೇ ಹೆಚ್ಚು ಹತ್ತಿರ..

16 comments:

 1. ನಮ್ಮ ಮನಸ್ಸು ಶುದ್ದವಿದ್ದರೆ ಜಗವೇ ಸುಂದರ!!!!{ if our heart is pure everything is pure}ಎಂಬ ಮಾತಿಗೆ ಅನ್ವರ್ಥವಾಗಿದೆ ಈ ಲೇಖನ, ಹೌದು ಬದುಕು ನಮಗೆ ಎಲ್ಲವನ್ನು ನೀಡುತ್ತದೆ , ನಮ್ಮ ಸಂಸ್ಕಾರ ಸರಿಯಿದ್ದಾಗ, ಜೀವನದ ಪಯಣದಲ್ಲಿ ಹೆತ್ತ ಮಡಿಲು ತಾಯಿ , ಕಾಪಾಡುವ ಒಡಲು ತಂದೆ , ತಿದ್ದಿ ಬುದ್ದಿ ಹೇಳುವ ಗುರುಗಳು , ಜೀವನದ ಹಾದಿಯಲ್ಲಿ ಮೈಲಿಗಲ್ಲಾಗುವ ಗೆಳೆಯರು ಸಿಕ್ಕರೆ ಕಾಣದ ಸ್ವರ್ಗಕ್ಕಿಂತ ಭೂಮಿಯೇ ವಾಸಿ . ಒಳ್ಳೆಯ ಆಶಯದ ಲೇಖನ ತಂಗ್ಯವ್ವ. ಖುಷಿಯಾಗುತ್ತೆ ಓದಿದರೆ .

  ReplyDelete
  Replies
  1. ಚಂದದ ಻ನಿಸಿಕೆಗೆ ಧನ್ಯವಾದಗಳು :) ನಿಮ್ಮ ಪ್ರೋತ್ಸಾಹ ಹೀಗೇ ಇರಲಿ...

   Delete
 2. ಧನ್ಯವಾದಗಳು ಮರಳಿ ಬ್ಲಾಗ್ ಗೆ ಬಂದಿದ್ದಕ್ಕೆ :)....
  ಛಂದದ ಲೇಖನ..ಬರೆಯುತ್ತಿರಿ..ನಮಸ್ತೆ :)

  ReplyDelete
 3. ಬ್ರಹ್ಮ ಸೃಷ್ಠಿಸಿದ ಈ ಲೋಕದಲ್ಲಿ ಬಂಧನ, ಭಾಂಧವ್ಯ, ಸಂಕೋಲೆ ಎಲ್ಲವೂ ಒಂದು ಭಿನ್ನ ಅನುಭವ ಕೊಡುತ್ತದೆ. ಅದರ ನಂಟು ಬ್ರಹ್ಮ ಹಾಕಿದ ಗಂಟು ಎನುತ್ತಾರೆ.. ಸರಸ್ವತಿ ಸೃಷ್ಠಿಸುವ ಅಕ್ಷರಗಳ ಲೋಕದಲ್ಲಿ ಕೊಡುವ ಮಮತೆಯ ಹರಿವಾಣದಲ್ಲಿ ಬಂಧನದ ಕಾವ್ಯ ಹಿಮಗಡ್ದೆಯಲ್ಲಿರುವ ನೀರಿನ ಹನಿಗಳ ಹಾಗೆ.. ಯಾವುದೇ ಸ್ಥಿತಿಯಲ್ಲಿಯೂ ಜೊತೆಜೊತೆ ಸಾಗುವರು ಇದ್ದೆ ಇರುತ್ತಾರೆ.

  ಸುಂದರ ಲೇಖನ ಪದ್ಮ ಪುಟ್ಟಿ ಅನಿಸುತಿದೆ ಅಷ್ಟೇ ಅಲ್ಲಾ ಬರೆಯುತ್ತಲೂ ಇದೆ..

  ಸೂಪರ್..

  ReplyDelete
  Replies
  1. ಧನ್ಯವಾದಗಳು ಶ್ರೀಕಾಂತಣ್ಣ... :) ಸುಂದರ ಕಾಮೆಂಟ್...

   Delete
 4. ಅಮ್ಮನ ಮುದ್ದಿನ ಮಗಳೇ...ಇದು ತುಂಬಾ ಜನ ಹೆಂಗಳೆಯರಿಗೆ ಅನ್ವಯಿಸೋ ಬರಹ...:)
  ಬಹಳ ಇಷ್ಟ ಆತು :)

  ReplyDelete
  Replies
  1. ಧನ್ಯವಾದಗಳು ಆದಿ... :)

   Delete
 5. ಅಮ್ಮಾ ಅನ್ನುವ ಭಾವವೇ ಹಾಗೆ.....

  ನಾವುಕೈ ಮುಗಿಯುವ ದೇವರೂ ಕೂಡ ಕೈ ಮುಗಿಯುವ ದೇವತೆ ಅಮ್ಮಾ.......

  ಒಳ್ಳೆಯ ಬರಹ............

  ReplyDelete
 6. nice one.. ಮಾನವನಿಗೆ ಒಳ್ಳೆ ಸಂಬಂಧಗಳು ಅಮೃತವಿದ್ದಂತೆ.

  ReplyDelete
 7. ಸಮರ್ಥಿಸಬೇಕೆಂಬ ಮನಸ್ಸಿದೆ. ಆದರೆ ಹೇಗೆ ಅಂತನೇ ಗೊತ್ತಾಗ್ತಿಲ್ಲ. ಸೋ... ತುಂಬಾ ಚೆನ್ನಾಗಿದೆ ಅಂತ ಮಾತ್ರ ಹೇಳಬಲ್ಲೆ. ಮುಂದುವರೆಸಿ...

  ReplyDelete
 8. ಜನನದ ಮೊದಲು........
  ..
  ..
  http://spn3187.blogspot.in/

  ReplyDelete