Friday, April 17, 2015

ಶುಂಟಿ ಪೆಪ್ಪರ್ ಮೆಂಟನ್ನು ನೆನೆಯುತ್ತಾ...

(ಈ ಬರಹ ನಾ ಬರೆದಿರೋದಲ್ಲ.. ಬರೆದಿರೋ ವ್ಯಕ್ತಿ ಅನಾಮಿಕನೆಂದು ಹೇಳುವುದಕ್ಕಿಂತ, ಅವರ ಹೆಸರನ್ನು 'ಅಪ್ಪಿಗುಬ್ಬಿ' ಎಂದೇ ಇಟ್ಟಿದ್ದಾಗಿದೆ...ನಾನು ಮೊದಲು ಈ  ಬರಹವನ್ನು ಓದಿದಾಗ ನನ್ನದೇ ಭಾವಗಳೆನಿಸುವಷ್ಟು  ಖುಷಿ ಕೊಟ್ಟಿತು..ಯಾವುದೋ ಹಾಳೆಯಲ್ಲಿ ಹುಟ್ಟಿ ಅಲ್ಲಗೇ ಕೊನೆಯಾಗುವುದಕ್ಕಿಂತ ಎಲ್ಲರ ಜೊತೆಗೆ ಹಂಚಿಕೊಳ್ಳಬೇಕೆಂದೆನಿಸಿತು.. ಹಂಚಿಕೊಂಡೆ.)..ಜಗತ್ತು ತುಂಬಾನೇ ಬದಲಾಗಿಬಿಟ್ಟಿದೆ..ಅದೆಷ್ಟು ದುಬಾರಿ ಆಗಿಬಿಟ್ಟಿದೆ ಕಣ್ರಿ..ನಾ ಚಿಕ್ಕೋನಿದ್ದಾಗ ಎರಡೂವರೆ ರೂಪಾಯಿಗೆ, ನನ್ನ ಹಚ್ಚ ಹಸಿರಿನ ,ಗಿಡಮರಗಳಿಂದ ತುಂಬಿದ್ದ, ಕಾಡುಗಳಿದ್ದ, ನಾಲ್ಕೇ ನಾಲ್ಕು ಮನೆಗಳಿದ್ದ ಪುಟ್ಟ ಹಳ್ಳಿಯಿಂದ, ಹನ್ನೆರಡು ಕಿ.ಲೋ ಮೀಟರ್ ದೂರದಲ್ಲಿರೋ ಹತ್ತು ಹದಿನೈದು ಅಂಗಡಿಗಳ ಸಾಲಿದ್ದ, ಪಟ್ಟಣ ಎಂದು ಕರೆಯಿಸಿಕೊಳ್ಳುವ ಪುಟ್ಟ ಪೇಟೆಗೆ ಬಂದು ತಲುಪುತ್ತಿದ್ದೆ..ಆದರೆ ಈಗ ಅದೇ ಸ್ಥಳಕ್ಕೆ ಅದೇ ಆರು ಚಕ್ರದ ಗವರ್ಮೆಂಟ್ ಬಸ್ ಗೆ  ಹದಿನೈದು ರೂಪಾಯಿ ಆಗಿಬಿಟ್ಟಿದೆ..
ಯಾವುದೋ ಹಳೆಯ ಡಬ್ಬಿಗಳಲ್ಲಿ ಕೂಡಿಟ್ಟ ಒಂದೆರಡು ರೂಪಾಯಿಯನ್ನು , ಸಾವಿರ ರೂಪಾಯಿಯ ಖುಷಿಯಂತೆ ಗಟ್ಟಿಯಾಗಿ ಹಿಡಿದು, ಕಿಸೆಯಿಂದ ಬಿದ್ದುಗಿದ್ದು ಏನಾದ್ರೂ ಹೋದ್ರೆ ಅನ್ನೋ ಹೆದರಿಕೆಯಲ್ಲಿ ಆಗಾಗ ಚೆಕ್ ಮಾಡಿಕೊಳ್ಳುತ್ತಾ, ಅದೇ ದುಡ್ಡನ್ನು ನೋಡಿ ಖುಷಿ ಪಡುತ್ತಾ ಸಾಗುತ್ತಿದ್ದರೆ, ಪೇಟೆಯ ಹನ್ನೆರಡು ಕಿ.ಲೋ ಮೀಟರ್ ದೂರವು, ಕ್ಷಣಮಾರ್ಧದಲ್ಲಿಯೇ ಬಂದು ಹೋಗುತ್ತಿತ್ತು..
ಆದರೆ ಇವತ್ತು ನನ್ನ ಅಕ್ಕನ ಪುಟ್ಟ ಮಗಳಿಗೂ ಬ್ರ್ಯಾಂಡೆಡ್  'ಡೇರಿ ಮಿಲ್ಕ್ ಸಿಲ್ಕ್' ಚಾಕೋಲೇಟೇ ಬೇಕಂತೆ..ಎಲ್ಲಾ ದುಬಾರಿಯ ಚಾಕಲೇಟಿನ ಹೆಸರನ್ನೂ ಎಷ್ಟೊಂದು ಚೆನ್ನಾಗಿ ಬಾಯಿಪಾಠ ಮಾಡಿಕೊಂಡಿದ್ದಾಳೆ.ನನ್ನ ಬಾಲ್ಯದಲ್ಲಿದ್ದ ಲಿಂಬೂ ಪೆಪ್ಪರ್ಮೆಂಟು , ಶುಂಟಿ ಪೆಪ್ಪರ್ಮೆಂಟು 2 ರೂಪಾಯಿಗೆ ಬೊಗಸೆ ತುಂಬಾ ಬರ್ತಿತ್ತಲ್ಲ.! ಈಗ ಅದಕ್ಕೂ ಮುಪ್ಪು ಬಂದು, ತನ್ನ ಗತ ವೈಭವ ನೆನೀತಾ, ಯಾವುದೋ ಮೂಲೆಯಲ್ಲಿ ಕೂತುಬಿಟ್ಟಿದೆ ಪಾಪ.
''ಚೀಲ ತುಂಬಾ ರೊಕ್ಕ ತೊಕ್ಕೊಂಡ್ ಹೋದ್ರೂ, ತರಕಾರಿ-ಸಾಮಾನು ಕಿಸೇನಾಗ್ ಹಾಕ್ಕೋಬರೋ ಹಂಗ್ ಆಗ್ಬಿಟ್ಟದ ಬಿಡಪ್ಪಾ" ಅಂತ ಬಯಲು ಸೀಮೆ ತಾತ ಲೊಚಗುಟ್ಟಿದ್ರಲ್ಲೂ ಅರ್ಥವಿದೆಯೆಂದೆನಿಸ್ತು.

 ಆದರೆ,
ಜಗತ್ತಿನಲ್ಲಿ ಅಂದೂ ಒಂದು ಬೊಗಸೆ ಪ್ರೀತಿ, ಪಾವು ತಟ್ಟೆ ಕಾಳಜಿಯನ್ನು ಸುತ್ತಮುತ್ತಲಿನ ಜನಕ್ಕೆ ತೋರಿಸಿದ್ರೆ,ಅದಕ್ಕಿಂತಲೂ ಹೆಚ್ಚು ಪ್ರೀತಿ ವಿಶ್ವಾಸ ಮರಳಿ ಸಿಗ್ತಾ ಇತ್ತು..ಅದು ಇಂದಿಗೂ ಬದಲಾಗಿಲ್ಲ..ಸ್ನೇಹ, ಪ್ರೀತಿ, ವಿಶ್ವಾಸ ಎಂದಿಗೂ ಬದಲಾಗಲಾರದು..ಥ್ಯಾಂಕ್ ಗಾಡ್..
ಹಂಗೇನೇ ನಾವು ಕಾಣೋ ಕನಸುಗಳಿಗೆ, ಕಾಣಬಯಸುವ ನಾಳೆಗೆ, ಭರವಸೆಯ ಯೋಚನೆಗಳಿಗೆ, ಆಸೆಗಳಿಗೆ ಬೆಲೆ ತೆರಬೇಕಾಗಿಯೇ ಇಲ್ಲ ನೋಡಿ!! ಇಂತಹ ಕಾಸ್ಟ್ಲೀ ದುನಿಯಾದಲ್ಲಿಯೂ ಅವು ಫ್ರೀ..
ಬದಲಾವಣೆ ಅನಿವಾರ್ಯವೇ.. ಆದರೆ ಒಂದಿಷ್ಟು ಉದ್ಧಾರ ಆಗೋ ಮನಸ್ಸು, ಅದಕ್ಕೆ ಪೂರಕ ವಾತಾವರಣ (ಎಲ್ಲರಿಗೂ ಸಿಗೋದಿಲ್ಲ,ಒಪ್ಕೋತ್ತೀನಿ) ಪರಿಶ್ರಮ, ಒಂದು ಗೋಣೀ ಚೀಲದಷ್ಟು ನಾಳೆಯ ಕನಸು,ಗೆದ್ದಾಗ ಖುಷಿ ಪಡೋ ಜೀವಗಳು, ಸೋತಾಗ ಕೈ ಹಿಡಿದು ನಡೆಸೋ ಭಾವಗಳಿದ್ದರೆ, ಜಗತ್ತು ಎಷ್ಟೇ ಬದಲಾದರೂ, ಎಷ್ಟೇ ದುಬಾರಿಯಾದರೂ ನಾವು ಅದಕ್ಕಿಂತ ಒಂದು ಕೈ ಮೇಲೆ ಹೋಗಿ ಖುಷಿಯಾಗಿರಬಹುದೇನೋ ಅಲ್ವಾ?..


ಬರಹ: ಅಪ್ಪಿಗುಬ್ಬಿ

7 comments:

 1. ನಾಲ್ಕೇ ನಾಲ್ಕು ಸಾಲಿನಂತ ಬರಹ ಎಲ್ಲೆಲ್ಲೋ ಓಡಾಡಿಸಿಬಿಡ್ತು ...
  ತುಂಬಾನೇ ಮುದ ನೀಡಿತು ಭಾವ...
  ಬರೆದ ಜೀವಕ್ಕೆ ಇನ್ನಷ್ಟು ಭಾವಗಳು ಒಲಿಯಲಿ...

  ReplyDelete
 2. This comment has been removed by a blog administrator.

  ReplyDelete
 3. Just wow... Anisuntaddu.... Manassige khushi koduvanthaddu... Gubbiyashte muddada baraha....

  ReplyDelete
 4. ಬೇಜಾರಾಗುವುದು ಹೆಚ್ಚಾದ ಬೆಲೆಗಳಿಗಲ್ಲ, ದೂರವಾದ ಸಂಬಂಧಗಳಿಗೆ. ಬದುಕೆಂಬ ಮ್ಯಾರಥಾನ್ ಪಯಣವನ್ನು ೧೦೦ಮೀ ಓಟದ ಸ್ಪರ್ಧೆಯನ್ನಾಗಿ ಭಾವಿಸಿರುವ ಮನುಷ್ಯರ ಮಧ್ಯೆ ಸಂಬಂಧಗಳೇ ನಶಿಸಿ ಹೋಗುತ್ತಿವೆಯೇನೋ ಅನ್ನಿಸುತ್ತದೆ.

  ಚಂದದ ಬರಹ. ಬಾಲ್ಯವನ್ನು, ಅದರ ಮಾಧುರ್ಯವನ್ನು ಒಮ್ಮೆ ನೆನಪಿಸಿತು ನಿಮ್ಮ ಬ್ಲಾಗು. ಬರೆಯುತ್ತಿರಿ.

  ReplyDelete