Tuesday, October 23, 2012

ನಿದ್ರೆಯನ್ನು ಹುಡುಕಿದೆ........

ಪರೀಕ್ಷೆಯೇನೋ ಮುಗೀತು ..ಸರಿಯಾಗಿ ನಿದ್ರೆ ಮಾಡ್ದೇ ಎಷ್ಟೋಂದು ದಿನ ಆಯ್ತು.. ನಿನ್ನೆ ಪರೀಕ್ಷೆ ಮುಗಿದ ಸಂಭ್ರಮದಲ್ಲಿ ಬೇಗ ನಿದ್ರಿಸಬೇಕೆಂದು ಮಲಗಿದರೆ ನಿದ್ರೆಯೇ ಬರುತ್ತಿಲ್ಲ.

. ಹದಿನೈದು ದಿನಗಳಿಂದ ಪರೀಕ್ಷೆಗೆ ತಡರಾತ್ರಿಯವರೆಗೆ ಕೂತು, ಬೆಳಿಗ್ಗೆ ಬೇಗ ಏಳುವುದೆಂದರೆ ಕಬ್ಬಿಣದ ಕಡಲೆಯಂತಾಗುತ್ತಿತ್ತು.. ಓದುತ್ತಾ ಓದುತ್ತಾ ನಿದ್ರಾದೇವಿಯು ಸೆಳೆದು ಕೊಳ್ಳುತ್ತಿತ್ತು..ಬೆಳಿಗ್ಗೆಯಂತೂ ಬಿಡಿ..ಪುಸ್ತಕ ನೋಡಿದರೆ ಸಾಕು ಕಣ್ಣುಗಳು ತನ್ನಿಂದ ತಾನೇ ಮುಚ್ಚುತ್ತಿತ್ತು..ಅಮ್ಮನ ಹತ್ತಿರ ಪ್ರತೀ ದಿನ ಬೆಳಿಗ್ಗೆ ಫೋನ್ ಮಾಡಿ ಸ್ವಲ್ಪ ಮಾತಾಡಿ ಎಬ್ಬಿಸು ಆಗ ಸರಿಯಾಗಿ ಎಚ್ಚರವಾಗುತ್ತೆ ಎಂದರೆ ಎರಡು ದಿನ ಮಾತ್ರರ..ಮೂರನೇಯ ದಿನದಿಂದ ಬೆಳಿಗ್ಗೆ ಫೋನ್ ರಿಂಗ್ ಆದ್ರೆ ಸಾಕು ಸ್ವಿಚ್ ಆಫ್ ಮಾಡಿ ಮತ್ತೆ ಮಲಗುವುದು.. ಅಲಾರಾಂ ಅಂತೂ ಎಷ್ಟು ಶಾಪವನ್ನು ತೆಗೆದುಕೊಂಡಿದೆಯೋ ಗೊತ್ತಿಲ್ಲ..  ನಾವು ಮೂವರೂ ಅಲಾರಾಂ ಇಟ್ಕೊಂಡು ಮಲಗ್ತಿದ್ವಿ.. ಮಲಗಿ ಸ್ವಲ್ಪ ಹೊತ್ತು ಆಯಿತೇನೋ ಎಂದಾಗ ಒಬ್ಬೊಬ್ಬರ ಅಲಾರಾಂ ಒಂದೊಂದು ತರಹ ಕೂಗಲು ಶುರು ಮಾಡ್ತಿತ್ತು..ಬಾಯಿಗೆ ಬಂದ ಎಷ್ಟೋ ಕವನಗಳು ಪರೀಕ್ಷೆಯ ದೃಷ್ಟಿಯಿಂದ ಮರೆಯಾಗುವಂತೆ ಮಾಡುತ್ತಿದ್ದೆ..

                  ಇನ್ನು ನನ್ನ ಒಬ್ಬಳು ರೂಂ ಮೇಟ್ ಪುಸ್ತಕ ಹಿಡಿದುಕೊಂಡೇ ಮಲಗುತ್ತಿದ್ದಳಾದರೂ, ಏ ನಿದ್ರೆ ಮಾಡ್ಬೇಡ  ಹೇಳಿದಾಕ್ಷಣ ನಾ ಓದ್ತಾ ಇದೀನಿ ನಿದ್ರೆ ಮಾಡಿಯೇ ಇಲ್ಲ ಎಂದು ಸಾಧಿಸುತ್ತಿದ್ದಳು. .ನಾನು ರಾತ್ರಿ ಬೇಗ ಮಲಗಿ ಬೇಗ ಏಳಬೇಕೆಂದುಕೊಂಡರೆ ಬೇಗ ಏನೋ ಮಲಗುತ್ತಿದ್ದೆನಾದರೂ ಏಳುವುದು ಸ್ವಲ್ಪ ಲೇಟಾಗಿಯೇ ಆಗುತ್ತಿತ್ತು.

   ಸ್ಟಡೀ ಹಾಲೀಡೇಸ್ ಲಿ ಕನಸುಗಳೂ ಬೀಳೋದು ಜಾಸ್ತಿ.. ಎದ್ದ ತಕ್ಷಣ  ಇವತ್ತು ನನ್ನ ಕನಸಿನಲ್ಲಿ ನೀನು ಬಂದಿದ್ದೆ ಎಂದು ಹೇಳುವುದರೊಳಗೇ ಬೆಳಕಾಗುತ್ತಿದ್ದವು.. ಪ್ರತೀ ದಿನವೂ ಒಬ್ಬರಿಗಲ್ಲ ಒಬ್ಬರಿಗೆ ಕನಸು..ಪರೀಕ್ಷೆಯಲ್ಲಿ ಡಿಬಾರ್ ಆದಂತೆ ಒಂದು ಕನಸು ಬಿದ್ರೆ, ಹಾಲ್ ಟಿಕೇಟ್ ಕಾಣೆಯಾದಂತೆ ಇನ್ನೊಂದು ಕನಸು..ಇನ್ನು ಫೇಸ್ಬುಕ್, ಬ್ಲಾಗ್ ಇಂದ ಸ್ವಲ್ಪ ದೂರವಿರೋಣ ಎಂದರೆ ಹಾಳೆಯಲ್ಲಿ ಬರೆದಿಟ್ಟ ಕವನವು ಬಾ ಎಂದು ಕರೆಯುತ್ತಿತ್ತು..

ಪರೀಕ್ಷೆ ಶುರುವಾಗಿ ಎಷ್ಟೊಂದು ದಿನ ಆಗಿತ್ತು ಅಬ್ಬ ಮುಗೀತಲ್ಲ..ಎಂದು ಖುಷಿ ಖುಷಿಯಲ್ಲಿದ್ದರೂ ನಾಳೆಯಿಂದ ಪರೀಕ್ಷೆಯನ್ನು ತುಂಬಾ ಮಿಸ್ ಮಾಡ್ಕೊಳ್ತೀವಿ ಎಂದೆಲ್ಲ ಅನಿಸಲು ಶುರುವಾಗಿತ್ತು.. ಲಾಸ್ಟ್ ಎಕ್ಸಾಂ  ಸೈಕಾಲಜಿ ಆಗಿದ್ದರಿಂದ ಬೇಗ ಬರೆದು ಪೇಪರ್ ಕೊಟ್ಟು ಬಂದರೆ ಸಾಕು ಎನ್ನುವಂತಾಗಿತ್ತು..

ನಿನ್ನೆ  ಮನವೆಲ್ಲಾ ಊರಿನ ಕಡೆಗೆ ಹೋಗುವ ದಿನವನ್ನು, ಅಣ್ಣನ ಮಗನನ್ನು ಎತ್ತಿ ಲಾಲಿ ಹಾಡುವ ಸಮಯವನ್ನು , ಅಮ್ಮನನ್ನು ನೋಡಿ ತಬ್ಬಿಕೊಳ್ಳುವ ಆಸೆಯನ್ನು  , ಅತ್ತಿಗೆ ಹತ್ತಿರ ಕಾಲೇಜಿನ ಸುದ್ದಿಗಳನ್ನೆಲ್ಲಾ ಹೇಳುವ ತವಕವನ್ನು, ಅಣ್ಣ ಹತ್ತಿರ, ಅಪ್ಪನ ಹತ್ತಿರ ಹೇಳುವ ಜೋಕುಗಳನ್ನು ಲೆಕ್ಕ ಹಾಕುತ್ತಿದ್ದ ನನಗೆ ಪರೀಕ್ಷೆ ಮುಗಿದರೂ ರಾತ್ರಿ ನಿದ್ರೆಯೇ ಬರಲಿಲ್ಲ...ಪರೀಕ್ಷೆಯ ದಿನ ಬೇಡವೆಂದರೂ ಬರುತ್ತಿದ್ದ ನಿದ್ರೆಯು ಈಗ ಎಲ್ಲಿ ಸರಿದು ಹೋಯಿತೋ..?