Monday, November 25, 2013

ವಿಳಾಸವಿಲ್ಲದ ಕನಸಿನ ಪ್ರೀತಿಯ ಸಾಲುಗಳು.....

ಆವತ್ತು ಏನೋ ಬರೆಯೋಣ ಅಂತ ಹೋದ್ರೆ ಬರೆಯುತ್ತಿದ್ದುದು ಪ್ರೀತಿಯ ಬಗೆಗೆ... ದೊಡ್ಡದಾಗಿ ಪ್ರೀತಿಯ ಹಾಡುಗಳೇ  ಕಿವಿಗೆ ಬಂದು ಅಪ್ಪಳಿಸುತ್ತಿತ್ತು.. . ನಿನ್ನ ಕನಸಿನ ಹುಡುಗ ಹೇಗಿರಬೇಕು ಎಂದು ರೂಂಮೇಟ್ ಕೇಳಿದ ಪ್ರಶ್ನೆಗೆ ನಾನು ಉತ್ತರ ನೀಡಲೇಬೇಕಾ? ಎಂದು  ಯೋಚಿಸಲು ಹೊರಟಿದ್ದೆ..  ಅವನ್ಯಾರೋ  ಒಂದು ದಿನ ಜೀವನದಲ್ಲಿ ಬರುವವನ ಬಗೆಗೆ ಕಟ್ಟಿದ ಕನಸುಗಳನ್ನೆಲ್ಲ ಹೇಳತೊಡಗಿದ್ದೆ.. ಬಹುಶಃ ಆ ಕನಸುಗಳಿಗೂ ಒಂದು ಪರಿಧಿಯೆಂಬುದಿಲ್ಲ ..ಮಿತಿಯೆಂಬುದಿಲ್ಲ. ಪಿಟೀಲು ಕುಯ್ಯಲು ನನಗೆ ಹೇಳಿಕೊಡಬೇಕಿಲ್ಲ...

ಅವನೆಂದರೆ ಪ್ರಪಂಚದಲ್ಲಿ ಅವನಿಗಿಂತಲೂ ನಾನ್ಯಾರನ್ನೂ ಹೆಚ್ಚು ಪ್ರೀತಿಸಬಾರದು..ನನ್ನ ಹುಚ್ಚು ಭಾವುಕತೆಗಳ ನಡುವೆ ಅವನದ್ದೊಂದು ಭಾವ ಸೇರಿ ಆಗಬೇಕು ಭಾವಗೀತೆಯ ಬದುಕು .. ಹಟಕ್ಕೆ ಬಿದ್ದ ಮನಸಿನ ಚಿತ್ರಗಳನೊಮ್ಮೆ ಬಣ್ಣ ಹಾಕಿ ಹೃದಯದ ಫ್ರೇಮ್ ನಲ್ಲಿ ಕಟ್ಟಿಸಿಡಬೇಕು.. ಕೆಲವೊಂದು ಬೇಸರ ಅಳು ದುಃಖಗಳ ನಡುವೆಯೂ ನನಗೆ ಅವನು ಅವಗೆ ನಾನೆಂಬ ಸಂತೋಷದ ದೋಣಿಯು ತೇಲಿ ಬಂದರೆ ಸಾಕು..ಪ್ರೀತಿಯೆಂಬ ಬೆರಳಿನ ತುದಿ ತಾಕಿದಾಗಲೂ ಅದೇ ಸಂತಸವಿದ್ದರೆ ನನಗೇನು ಬೇಕು.. ದಿಟ್ಟಿಸುತ್ತ ನೋಡುವಾಗ ಚಂದ್ರನೂ ಸರಿಸಾಟಿಯಾಗಲಾರ ಬೆಳದಿಂಗಳಲ್ಲಿ.. ಹಣೆಗೆ ಹಣೆ ತಾಕುವಷ್ಟು  ಹತ್ತಿರದಿಂದ ಮಾತನಾಡಿದರೆ ಕಳೆದು ಹೋದವೇನೋ ದಿನಗಳು..ಮರೆಯಾಗದೇ ಇರುವ ಹುಚ್ಚಿನ ಕನಸುಗಳಿಗೆ ನನಸೆಂಬ ಹಣೆಪಟ್ಟಿಯನ್ನು ಕೊಟ್ಟರೆ ಅದೆಂಥ ಸುಂದರ ಬದುಕು..

ಒಂದೇ ಒಂದು ದಿನ ಇಬ್ಬರಲ್ಲಿ ಒಬ್ಬರು ಮನೆಯಲ್ಲಿಲ್ಲದಿದ್ದರೂ ಕೇಳಿಸುತ್ತಿರುವಂತೆ  ಮಾತುಗಳು .. ಅವನ ಪ್ರತೀ ಮೌನದಲ್ಲಿಯೂ ನನ್ನ ಧ್ವನಿಯನ್ನು ಹೊರಹೊಮ್ಮಿಸಬೇಕಿದೆ..ಅವನು ನನ್ನ ಬದುಕಿನ ಭಾಗವಾಗಿರದೇ ನನ್ನ ಬದುಕೆಂಬ ಪಯಣಕ್ಕೆ ಇಟ್ಟುಬಿಡುವೆ ಅವನ ಹೆಸರನ್ನು..ಕಟ್ಟಿದ ಆಸೆಗಳ ಗೋಪುರದ ತುತ್ತ ತುದಿಯವೆರಗೂ  ಜೊತೆಗೇ ಕೈ ಹಿಡಿದು ನಡೆದರೆ ಅದ್ಯಾವ ಸುಸ್ತು, ದಣಿವು ಆಗಲಾರದು..ಹೊಟ್ಟೆ ಹುಣ್ಣಾಗಿಸುವಂತೆ ನಕ್ಕಾಗ , ಅದೇ ನಗುವಿನ ಕಣಗಳೆಲ್ಲ ಅವನನ್ನೇ ನೆನಪಿಸುವಂತದ್ದರೆ ನಾನೆಂದೂ ನಗುತ್ತಲೇ ಇರುವೆನು.


                                               ಕಳೆಯಬೇಕು ನೂರು ವರುಷಗಳು,
                                              ಯೌವ್ವನದಿ, ಮುಪ್ಪಿನಲಿ ಕೂಡಿ ಸಾಗುತ್ತ..
                                              ಸಾಲು  ಸಾಲು ದೀಪಗಳ ಬೆಳಕನ್ನು,
                                              ಕಣ್ಣಿನಲಿ , ಹೃದಯದಲಿ , ಮನಸಿನಲಿ ಕಾಣುತ್ತ...
                                              ಅಲೆಗಳಾಗಿ ಬರುವ ಖುಷಿಯಲಿ, ಬೇಸರದಿ
                                              ಒಬ್ಬರಿಗೊಬ್ಬರಿಗೆ ಆಸರೆಯಾಗುತ್ತ..
                                             ಸೊಗಸಾದ ಮೌನದ ಗಳಿಗೆಯಲಿ
                                              ಪ್ರೀತಿಯಿಂದ ದಿಟ್ಟಿಸುತ್ತ ...
                                             ಬೆಳದಿಂಗಳಲಿ ಕೈಹಿಡಿದು
                                              ತುತ್ತನ್ನೊಂದು ತಿನ್ನಿಸುತ್ತ
                                             ಮಗದೊಮ್ಮೆ ಮತ್ತೊಮ್ಮೆ ಕಳೆಯಬೇಕು
                                               ನೂರು ವರುಷಗಳನು


 ಸಂಬಂಧಗಳೆಂದರೆ ಭದ್ರವಾಗಿರಬೇಕು.. ಚಿನ್ನಕ್ಕಿಂತಲೂ ಹೊಳಪಿರಬೇಕು.. ಚಿನ್ನವನ್ನು ಫಾಲಿಶ್ ಮಾಡಿದಂತೆ ಹೆಚ್ಚು ಹೆಚ್ಚು ಪ್ರೀತಿಗಳಿಂದ ಸಾಗುತ್ತಿರಬೇಕು.... ಯಾರು ಸರಿ ಯಾರು ತಪ್ಪೆಂಬ ವಾದಕ್ಕಿಂದ ಬದುಕನ್ನು ಪ್ರೀತಿಯಲಿ ತೇಲಿಸುವಂತೆ.. ಪ್ರತೀ ಮುಂಜಾವೂ ಅವನ ಮುಖ ನೋಡಿ ಪ್ರೀತಿಯೊಂದಿಗೆ ಆರಂಭವೇ ಆಗಬಹುದು..ತುಂತುರು ಮಳೆಗಳಲಿ ಒಂದೇ ಸಮನೆ ಎಂದೋ ಬರೆದಿಟ್ಟ ಪ್ರೀತಿಯ ಕವನವನ್ನು ಓದಿದಾಗ ಅವನಿಂದ ಭೇಷ್ ಎಂಬ ಪದಗಳಿಗೆ ಕೊರತೆಯಿರಬಾರದು..ಅವನ್ಯಾರೋ ಏನ್ ಮಾಡ್ತಾ ಇದ್ದಾನೋ ಇಷ್ಟು ಹೊತ್ತಿಗೆ.. ಅಂತ ಎಷ್ಟೋ ಸಲ ಯೋಚಿಸಿದ್ದೇನೆ..  ಪ್ರೀತಿಯ ಪತ್ರಗಳನ್ನೆಷ್ಟೋ ವಿಳಾಸವಿಲ್ಲದವನಿಗೆ, ಗೊತ್ತಿಲ್ಲದವನಿಗೆ ಬರೆದು ಭದ್ರವಾಗಿ ಇರಿಸಿದ್ದೇನೆ....ನಾನು ಒಬ್ಬಂಟಿ ಅಂತ ಯೋಚಿಸ್ತಾ ಇದ್ದಾಗ .ಬಹುಶಃ ನನಗಾಗಿ ಹುಟ್ಟಿದ ಅವನೂ ನನ್ನಂತೆಯೇ ಯೋಚಿಸುತ್ತ ಇರಬಹುದೇನೋ....