Saturday, June 30, 2012

ಆ ಮುಂಜಾವು

ವಸಂತ ಕಾಲದಿ
ಮೂಡಣ ತೆರದಿ
ಹಕ್ಕಿಗಳ ಇಂಚರವು
ಸೃಷ್ಟಿಸಿತ್ತು ಸುಮಧುರ
ಲೋಕವ
ಹೊಂಬೆಳಕಿನ ತುಸು ಮುಂಜಾವಿನ
ಇಬ್ಬನಿಯ ನೋಡಿ
ಸಂಭ್ರಮಿಸಿತ್ತು ಈ
 ನನ್ನ ಕಂಗಳು
ಹಸಿರ ಚಿಗುರಿನಲ್ಲಿ
 ಕನಸು  ಮೂಡಿ
ತುಟಿಯಂಚಿನಲಿ ಸಣ್ಣ ನಗುವು..
ಮನಸು ಕನಸಿನ ಮಾತಿಗೆ
ಆ ಬೆಳ್ ಮುಂಜಾವು ಸಾಕ್ಷಿಯಾಗಿ
ಆಲೋಚಿಸಿತ್ತು ಬದುಕಿನ ಬಗೆಗೆ
ಪೃಕೃತಿಯ ರಮಣೀಯ ದೃಶ್ಯವು
ತೋರಿಸಿತ್ತು
ಸಾಗುವ ದಾರಿಯನ್ನು..
Wednesday, June 27, 2012

ಸಾಗಬೇಕು ಬಹುದೂರ...

ದಿನಗಳು ಉರುಳುತ್ತಿವೆ
ಯಾರಿಗೂ ಕಾಯದಂತೆ,
ವೇಗವಾಗಿ ಸಾಗುತಿದೆ
ಬದುಕೆಂಬ ಗಾಡಿಯು
ನನ್ನ ಪಾಲಿನ
ಕಷ್ಟ ಸುಖಗಳು, ಅನುಭವಗಳೆಲ್ಲವೂ
ಕೇವಲ ಚಿಗುರುಗಳಷ್ಟೇ,

ಸಾಗಬೇಕಿದೆ ಇನ್ನು ಬಹುದೂರ
ಕಳೆದಿರುವ ದಿನಗಳಿಗಿಂತ ಕಳೆಯಲಿರುವ
ದಿನಗಳೇ ಹೆಚ್ಚಾದಾಗ
ಬೇಕಲ್ಲವೇ ಬದುಕಿನುದ್ದಕ್ಕೂ
ಸಾಧನೆಯ ಹೆಜ್ಜೆಗಳು
ಕಂಡ ಸಿಹಿ ಸ್ವಪ್ನಗಳಲಿ
ನನಸೆಂಬ ನಂಟಿಗೆ
ಬೇಕಾಗಿದೆ ಚಿಂತನೆಯ ಬದುಕು
ಮೌಢ್ಯತೆಗಳೆಲ್ಲ ಮೋಡದಲಿ
ಮುಸುಕಿ ಹೋಗಬೇಕಾಗಿದೆ
ಗುರಿಯೆಡೆಗೆ ಮುಖ ಮಾಡಿ
ಬದುಕಿನ ಕನಸುಗಳಿಗೆ
ಭಾವನೆ ತುಂಬಿ
ಆಗಬೇಕಿದೆ ಬದುಕೆಂಬುದು
ನನ್ನ ಪಾಲಿಗೊಂದು ಭಾವಗೀತೆ

                                                                                                                                                                                     

Sunday, June 24, 2012

ಮನವೇ ನಿನ್ನ

ನೋಟದಲಿ ನೋಡುತಿರೆ
ಹೃದಯದಲಿ ಇಂದು
ಭಾವಲೋಕದ ಸೃಷ್ಟಿಯ ಲಹರಿ
ಅರಳಿತು ಭಾವನೆ ಅರಿವಿಲ್ಲದೆ
ಬಯಸುವ ಏಕಾಂತಕೆ
ಸಂಗೀತದ  ಮಳೆಯ ಹನಿ
ಎಲ್ಲವೂ ಶೂನ್ಯವಾಯಿತು
ಮನವೇ ನಿನ್ನ ಮಾತೊಂದೇ
ನನ್ನ ಬದುಕಾಯಿತು
ಸುಳಿವಿಲ್ಲದೆ ಹೊರಟ ಮಾತೆಲ್ಲವೂ
ಮರಳಿ ಜೊತೆಯಾಯಿತು
ಚಿತ್ತಾರ ಲೋಕವೆಲ್ಲ ಗಂಭೀರದೆಡೆಗೆ
ಮುಖಮಾಡಿತು
ಬದುಕು ಹೆಣೆಯುವ ಕೆಲಸ
ಮಾಡೆಂದು ನನ್ನ ಮನವಿಂದು ಹೇಳಿತು

Wednesday, June 13, 2012

ನನ್ನ ಪ್ರೀತಿಯ ಛತ್ರಿ/ಕೊಡೆ

ಯಾಕೋ ನನ್ನ ಛತ್ರಿ ದಿನದಿಂದ ದಿನಕ್ಕೆ ಕಡ್ಡಿಯನ್ನು ಮುರಿದುಕೊಳ್ಳುತೊಡಗಿತ್ತು .
ಅದು ನನ್ನ ಪ್ರೀತಿಯ ಛತ್ರಿಯಾಗಿತ್ತು.ಮೂರು ವರುಷಗಳ ಹಿಂದೆ ಅಪ್ಪನ ಜೊತೆಗೆ
ಪೇಟೆಗೆ ಹೋದಾಗ ಬಿಳಿಯ ಬಣ್ಣದ ಪರದೆಯ ಮೇಲೆ ಕೆಂಪು ಪಾತರಗಿತ್ತಿ ಇದ್ದ ಚಿತ್ರ ನೋಡಿದೆ
.ಅದನ್ನು ಬಿಡಿಸಿದಾಗ ಪಾತರಗಿತ್ತಿ ಹಾರಿದಂತೆ ಭಾಸವಾಗುತ್ತಿತ್ತು.ಆ ಛತ್ರಿಗೂ ನನಗೂ ಯಾವ ಜನುಮದ
ಅನುಬಂಧವಿತ್ತೋ ಏನೋ..ಆ ಛತ್ರಿಯೇ ಬೇಕೆನಿಸಿ ಅದು ಚೆನ್ನಾಗಿಲ್ಲವೆಂದು ಅಪ್ಪ ಹೇಳಿದರೂ ಹಠ ಮಾಡಿ ತೆಗೆದುಕೊಂಡಿದ್ದೆ.ನಾನು ಎಲ್ಲೇ ಹೋದರೂ ಆ ಛತ್ರಿ ನನ್ನ ಜೊತೆಗೇ ಇರುತ್ತಿತ್ತು.ಮನೆಯವರಿಗ್ಯಾರಿಗೂ
ಆ ಛತ್ರಿಯನ್ನು ಒಯ್ಯಲು ಬಿಡುತ್ತಿರಲಿಲ್ಲ.ಅವರೇನಾದರೂ ಅದನ್ನು ಮುರಿದುಕೊಂಡು ಬಂದರೆ,
ಅಥವಾ ಕಾಣೆ ಮಾಡಿಕೊಂಡು ಬಂದರೆ ಎನ್ನುವ ಮಟ್ಟಿಗೆ ಆ ಛತ್ರಿಯ ಬಗೆಗಿನ ಪ್ರೀತಿ ನನ್ನದಾಗಿತ್ತು.
ನನ್ನ ಗೆಳತಿಯಾಗಿಬಿಟ್ಟಿತ್ತು ಅದು.ಮಳೆಗಾಲದ ನನ್ನ ಕನಸುಗಳು, ಭಾವನೆಗಳು ಆ ಛತ್ರಿಗೂ ಗೊತ್ತಿತ್ತು.ಆ ಛತ್ರಿಗೆ ದಕ್ಕೆಯಾಗದಿರಲೆಂದು ಅದೆಷ್ಟು ಬಿರುಗಾಳಿಯಲ್ಲಿ ನಾನೇ ತೋಯ್ದುಕೊಂಡು ಹೋಗಿದ್ದೇನೆ. ನನ್ನ ಗೆಳತಿಯರೆಲ್ಲಾ ಮಳೆಯಲ್ಲಿ ತೊಯ್ಯದಂತೆ ರಕ್ಷಿಸಿದ ನನ್ನ ಛತ್ರಿಯು ಇಂದೇಕೋ ಹಾಳಾಗುತ್ತಿದೆ.
ಛತ್ರಿ ರಿಪೇರಿ ಮಾಡುವವನ ಹತ್ತಿರ ಹೋಗಿ ರಿಪೇರಿ ಮಾಡು ಎಂದರೆ ಎಷ್ಟು ಸಿಂಪಲ್ಲಾಗಿ ಹೇಳ್ಬಿಡ್ತಾನೆ.
.ಬೇರೆ ಛತ್ರಿ ತೊಗೊಳ್ರಿ ಎಂದು...ದೂರದ ಊರಲ್ಲಿ ಮನೆಯವರು ನೆನಪಾದಾಗ ಜಾರುತ್ತಿದ್ದ ಕಣ್ಣೀರಿಗೆ
 ಛತ್ರಿ ಅಂಚಿನಲ್ಲಿ ಹರಿಯುವ ಮಳೆಯ ಹನಿಯು  ಸಾಥ್ ನೀಡುತ್ತ ನನಗೆ ಸಮಾಧಾನಿಸುತ್ತಿತ್ತು..ಆ ಛತ್ರಿ
ಇದ್ದುದ್ದರಿಂದ ಮಳೆಗಾಲವೆಂದೂ ಬೋರ್ ಅನಿಸಲೇ ಇಲ್ಲ..ಈ ಛತ್ರಿಯ ಕಡ್ಡಿಗಳು ಮುರಿದು ಹೋಗಿವೆಯಾದರೂ,
ಹೊಸ ಛತ್ರಿ ತೆಗೆದುಕೊಂಡರೂ ಈ ಛತ್ರಿಯನ್ನೇಕೋ ಕೈ ಬಿಡಲು ಏಕೋ ಮನಸ್ಸಾಗುತ್ತಿಲ್ಲ...ಎಷ್ಟೆಂದರೂ ನನ್ನ ಭಾವನೆಗಳು ಸೇರಿಲ್ಲವೇ ಆ ನನ್ನ ಪ್ರೀತಿ ಛತ್ರಿಯಲ್ಲಿ...

ಅರ್ಥವಾಯಿತೇ....

ಕಣ್ಣೀರೇ ಜೊತೆಯಾಯಿತೇ
ಆ ಒಬ್ಬಂಟಿ ಜೀವಕೆ
ಬಣ್ಣ ಬಣ್ಣದ ಕನಸುಗಳಿಗೀಗ
ಕಪ್ಪು ಬಣ್ಣವೊಂದೇ ಕಾಣುತಿದೆ
ನೋವು ಮುಸುಕಿದ ಛಾಯೆಗೆ 
ಎಲ್ಲವೂ ಬರಿದಾಗಿದೆ
ಆ ಮುಗ್ಧ  ಹೃದಯದ ಮುಗ್ಧ ಪ್ರಶ್ನೆಗಳೆಲ್ಲವೂ
ಉತ್ತರ ಸಿಗದೇ ತಡಕಾಡಿದೆ
ತವಕದಿಂದ ಮಾತನಾಡಬೇಕೆಂಬ ಹಂಬಲಕ್ಕೆ
ಪರಿಹಾರವೆಂದಿಲ್ಲ
ಪ್ರೀತಿ ಕಡಿಮೆಯಾಯಿತೆಂಬ ಉತ್ತರಕ್ಕೆ
ತಿಳಿಯಬಹುದು ಆ ಒಲವು ಕಳೆದು ಹೋದ ಮೇಲೆ
ಅರ್ಥವಾಗಬಹುದೇ ಪ್ರೀತಿ ಎಂದಾದರೂ....