Sunday, January 31, 2016

ಮೊದಲ ಸಂಬಳವೆಂದರೆ...

..  ಜೀವನದ ಸಣ್ಣ ಪುಟ್ಟ ಘಟನೆಗಳು ಕಾಡುತ್ತೆ.. ಕಾಲೇಜು ದಿನಗಳಲ್ಲಿ ಬೇಗ ಓದು ಮುಗೀಲಿ, ಕೆಲಸಕ್ಕೆ ಬೇಗ ಸೇರಬೇಕು ಎಂದು ಅನಿಸುತ್ತಿದ್ದುದು ಸುಳ್ಳಲ್ಲ..ಫೇರ್ ವೆಲ್ ದಿನ ಅಯ್ಯೋ ಮುಗೀದೇ ಹೋಯ್ತಾ ಎಂದೆನಿಸಿದ್ದೂ ನಿಜ..  ಕಾಲೇಜು ಜೀವನಕ್ಕೆ ವಿದಾಯ ಹೇಳಿ ಕೆಲವು ತಿಂಗಳುಗಳು ಕಳೆದಿದೆ. ಆರು ತಿಂಗಳ ಹಿಂದಷ್ಟೇ ಓದು ಮುಗಿಸಿ ಬೆಂಗಳೂರೆಂಬ ಮಹಾನಗರಿಗೆ ಬರುವಾಗ ಭಯ, ಆತಂಕ, ಅದೆಲ್ಲೋ ಚೂರು ಖುಷಿ..
 ಅಂಕದ ಪಟ್ಟಿ ಕೈಗೆ ಬರುವ ಮೊದಲೇ ಕೆಲಸ ಸಿಕ್ಕಿದಾಗ ಮೊದಲ ಸಂಬಳಕ್ಕಾಗಿ ಕಾದ ಪರಿಯಂತೂ ಹೇಳತೀರದು..  ಜೀವನದ ಮೊದಲ ಸಂಬಳವನ್ನು ಹೆತ್ತವರ ಕೈಗಿತ್ತು  ಅವರ ಕಣ್ಣಿಂದ ಜಾರುವ ಪ್ರೀತಿಯನ್ನು  ಎದೆಗಪ್ಪಿಕೊಳ್ಳಬೇಕೆಂಬ ಬಹುದಿನದ ಕನಸು ನನಸಾಗಿತ್ತು.. .
ಮೊದಲ ಸಂಬಳ ಬಂದ ಕೂಡಲೇ ಊರಿಗೆ ಹೊರಟಿದ್ದೆ.. ಅದನ್ನು ಎಷ್ಟೊತ್ತಿಗೆ ಮನೆಯವರ ಕೈಲಿ ಇಡುತ್ತೀನೋ ಎಂಬ ಧಾವಂತ. ಬಸ್ಸಿನಲ್ಲಿ ರಾತ್ರಿಯೆಲ್ಲಾ ನಿದ್ದೆಯೇ ಬಂದಿರಲಿಲ್ಲ.. ಬೆಳಿಗ್ಗೆ ಮನೆ ತಲುಪಿದ ಕೂಡಲೇ ಹೇಳಿದ್ದೆ.. ." ಅಪ್ಪ ಅಮ್ಮ...    ಇದು ನನ್ನ ಮೊದಲ ಸಂಬಳ. ನೀವು ನನಗೆ ಮಾಡಿದ್ದಕ್ಕೆ ನಾ ಕೊಡುತ್ತಿರುವುದು ಏನೂ ಅಲ್ಲ.. ಇದು ಒಂದು ಚಿಕ್ಕ ಖುಷಿ ಅಷ್ಟೇ"  ಎಂದು ಅವರ ಕೈಗೆ ಮೊದಲ ಸಂಬಳವನ್ನು ಇರಿಸುವಾಗ ಒಂದು ರೂಪಾಯಿಯನ್ನೂ ಮುಟ್ಟದೇ ಖುಷಿಯಿಂದಲೇ ತಿರಸ್ಕರಿಸಿ  ಮಗಳೇ.. ಇದನ್ನೆಲ್ಲಾ ನಾವು ಎಂದಿಗೂ ಬಯಸಿಲ್ಲ, ಬಯಸೋದೂ ಇಲ್ಲ ನಾ ಮಾಡಿದ್ದು ನನ್ನ ಕರ್ತವ್ಯ ಅಷ್ಟೇ..  ಎಂದಾಗ ಆ ಕ್ಷಣಕ್ಕೆ ಮೂಕಿಯಾಗಿಬಿಟ್ಟಿದ್ದೆ..

ಅಪ್ಪನ ದುಡ್ಡನ್ನು ಧಾರಾಳವಾಗಿಯೇ ಖರ್ಚು ಮಾಡುತ್ತಿದ್ದ ನನಗೆ ,  ನನ್ನ ಸಂಬಳ ಬಂದಾಗಲೇ ಅದರ ಬೆಲೆ ಗೊತ್ತಾಗಿದ್ದು. ಅದರ  ಖುಷಿಗೆ ಎಲ್ಲೆಯಿರಲಿಲ್ಲ.. ಅದೊಂಥರಾ ಭಾವ.. ಕಪಾಟಿನ ತುಂಬೆಲ್ಲಾ ಸೀರೆ ಇದ್ದರೂ ನನ್ನ ಸಂಬಳದಲ್ಲಿ ಅಮ್ಮನಿಗೆ ಕೊಡಿಸಿದ  ಸೀರೆಯ ನೆರಿಗೆಗಳೇ ಅಮ್ಮನ ಮುಖದ  ಖುಷಿಯನ್ನು ಹೇಳುವಂತಿತ್ತು..

ಎಲ್ಲರ ಜೀವನದಲ್ಲಿಯೂ ಇದು ಸಾಮಾನ್ಯವೇ ಆಗಿರಬಹುದು.. ಅಥವಾ ಕೆಲವರಿಗೆ ಅದರಲ್ಲೇನು ವಿಶೇಷತೆ ಇದೆ ಎಂತಲೂ ಅನ್ನಿಸಿರಬಹುದು.. ಆದರೆ ಜೀವನದ ಚಿಕ್ಕ ಪುಟ್ಟ ಸಂಗತಿಗಳಲ್ಲಿ ಖುಷಿ ಪಡುವ ನನ್ನಂಥವರಿಗೆ ಆ ದಿನ ದೊಡ್ಡದಾಗಿತ್ತು.. ಕಾಲೇಜಿನ ದಿನಗಳಲ್ಲಿ ನಿಂಗೆ ಕೆಲಸ ಸಿಕ್ಕಿದ್ಮೇಲೆ ನಿನ್ ಫಸ್ಟ್ ಸಾಲರೀಲಿ ಏನ್ ಮಾಡ್ತೀಯಾ ಎಂದು ದೂರದ ಕನಸನ್ನು ಹಂಚಿಕೊಳ್ಳುತ್ತಿದ್ದ  ಕ್ಷಣಗಳೆಲ್ಲಾ ನೆನಪಾಗಿತ್ತು.. ಅದೇನ್ ಮಹಾ ಸಾಧನೆ ಅಲ್ಲ ಎನ್ನುವುದು ಗೊತ್ತಿದ್ದರೂ, ಎಂದೋ ಕಂಡಿದ್ದ ಸಣ್ಣ ಕನಸಿನ ಸಾಕಾರವಾಗಿತ್ತು.. ಮೊದಲು ಎಂಬುವುದಕ್ಕೆ ಎಷ್ಟು ಮಹತ್ವ ಎಂಬ ಅರಿವಾಗಿದ್ದು ಎರಡನೇಯ ಸಂಬಳ ಬಂದಾಗ..
      ಮೊದಲ ಸಂಬಳ ಬಂದು 6 ತಿಂಗಳೇ ಕಳೆದರೂ,  ಆ ಮೊದಲ ಸಂಬಳ ಬಂದ ದಿನವಿನ್ನೂ ಕಣ್ಣಿನಲ್ಲಿಯೇ ಕಟ್ಟಿಟ್ಟಂತೆ ಇದೆ..


3 comments:

  1. ನಿಜಕ್ಕೂ ನಿನ್ನ ಬಗ್ಗೆ ಹೆಮ್ಮೆ ಆಯ್ತು ಪುಟ್ಟಿ, ನಿಜ ಈ ಲೇಖನದ ಪ್ರತೀ ಪದದಲ್ಲೂ ನಿನ್ನ ಹೃದಯ ನಿನ್ನ ತಂದೆತಾಯಿಗಳ ಬಗ್ಗೆ ನಿನಗಿರುವ ತುಡಿತದ ದರ್ಶನ ಮಾಡಿಸಿದೆ. ನಿನ್ನ ಜೀವನದಲ್ಲಿ ನಿನಗಿರುವ ಇಂತಹ ಸಂಸ್ಕಾರವೇ ನಿನಗೆ ಶ್ರೀ ರಕ್ಷೆಯಾಗಿ ನಿನ್ನನ್ನು ಉನ್ನತ ಸಾಹನೆಗೆ ಕರೆದೊಯ್ಯುತ್ತದೆ ಖಂಡಿತಾ . ನಿನಗೆ ಶುಭವಾಗಲಿ ಪುಟ್ಟಕ್ಕ

    ReplyDelete
  2. Cholo idde.... First salary day nenapaatu... nice one.. keep it up :)

    ReplyDelete
  3. Siddu Satyannavar1 February 2016 at 14:32

    ಭಾಳ ಚೊಲೊ ಬಂದೈತಿ ಬರಹ.......! ಬರೆಯೋಕೆ ಸಾವಿರ ಕಾರಣ. ಆದ್ರ ಇಂಥಾ ಬರವಣಿಗೆಗಳಿಗೆ ಭಾವನೆಗಳು ಬೇಕು.

    ReplyDelete