Wednesday, February 20, 2013

ಅದೇಗೆ ಕಳೆಯಿತೋ....


ಇನ್ನು ಸ್ವಲ್ಪ ದಿನಗಳು ಮಾತ್ರ.. ಈ ಕಾಲೇಜ್ ಬಿಟ್ಟು ಹೋಗ್ತೀರಾ ಬೇಜಾರಾಗ್ತಾ ಇದ್ಯಾ ? ಅಥವಾ ಖುಷಿ ಆಗ್ತಾ ಇದೆಯಾ?
ಎಂದು ಆ ಕ್ಲಾಸಿನಲ್ಲಿ ಉಪನ್ಯಾಸಕರು ಎಲ್ಲರಲ್ಲಿಯೂ  ಕೇಳಿದಾಗ ಉತ್ತರವೇ ಬಂದಿರಲಿಲ್ಲ..ಬದಲಿಗೆ ನೆನಪುಗಳ ಲೋಕಕ್ಕೆ ಪಯಣಿಸಿದ್ದೆ....
ಮೂರು ವರುಷಗಳ ಹಿಂದಿನ ಮಾತು ಆಗ ತಾನೇ ಶಿರಸಿಯಲ್ಲಿ ಪಿ.ಯು.ಸಿ ಮುಗಿಸಿದ ನನಗೆ   ಮುಂದೆಲ್ಲಿ ಎಂಬ ಪ್ರಶ್ನೆ ಕಾಡಿತ್ತು..ಅಪ್ಪ ಹತ್ತಿರ  ಕರೆದು ಉಜಿರೆಗೆ ಹೋಗು ಎಂದಾಗ ಮುಖ ಸೊಟ್ಟಗಾಗಿತ್ತು..ಏಕೆಂದರೆ ನನ್ನಲ್ಲಿ ಉಜಿರೆ ಎಂದರೆ ಕೇವಲ ಸ್ಟ್ರಿಕ್ಟ್, ಮನೆಯಿಂದ ದೂರ ಮತ್ತು ಸೆಕೆ ಜಾಸ್ತಿ  ಎಂಬ ಭಾವನೆಯಿತ್ತು.. ಮನೆಯಲ್ಲೆಲ್ಲ ಇಡೀ ದಿನವೂ  ಅದರ ಬಗ್ಗೆಯೇ ಮೀಟಿಂಗು.."ನಿಂಗೋ ಎಷ್ಟ್ ಹೇಳಿದ್ರೂ ಅಷ್ಟೆ ನಾ ಅಂತೂ ಹೋಗ್ತ್ನಿಲ್ಲೆ"
 ಎಂಬ ನನ್ನ  ವಾದದ ಕಡೆಗೆ ಅಮ್ಮನೂ ಇದ್ದಳು..ಯಾವಾಗಲೂ ನನ್ನ ಬೇಕು ಬೇಡಗಳನ್ನು , ನನ್ನ ಆ ಸೆಗಳನ್ನು ಎಲ್ಲವನ್ನೂ ಖುಷಿಯಿಂದಲೇ ನಾ ಹೇಳಿದಂತೆಯೇ  ಕೇಳುತ್ತಿದ್ದ ಅಪ್ಪನು ಉಜಿರೆಗೆ ಹೋಗುವ ವಿಷಯದಲ್ಲಿ ಮಾತ್ರ  ಸ್ಟ್ರಿಕ್ಟ್ ಆಗಿ ಕೂತಿದ್ದ..
ಅಂತೂ ಅಣ್ಣನ ಜೊತೆಗೆ ಉಜಿರೆಯ ಕಡೆಗೆ ಪ್ರಯಾಣ ಬೆಳೆಸಿದೆ ..ಉಡುಪಿಯ ವರೆಗೆ ಮಾತ್ರ ತಲುಪಿದ್ದೆವು.. ಇನ್ನೂ ಮೂರು ತಾಸುಗಳಂತೆ ಉಜಿರೆಗೆ ಎಂದಾಗ ವಾಪಸ್ಸು ಮನೆಗೆ ಹೋಗೋಣ ಎನ್ನಲು ಶುರು ಮಾಡಿದೆ ನಾನು... ಪ್ರೀತಿಯ ಮಾತುಗಳಿಂದ ಅಣ್ಣನು ಉಜಿರೆಗೂ ತಲುಪಿಸಿದ.. ಕಾಲೇಜಿಗೆ  ತಲುಪಿದ ಕೂಡಲೇ ಸ್ಥಳದಲ್ಲಿಯೇ ಅಡ್ಮಿಷನ್ ಸಿಕ್ಕಿತ್ತು..ಅದನ್ನೂ ಮಾಡಿಸಿದ ಅಣ್ಣ..
ಮನೆಗೆ ಹಿಂತಿರುಗಿದಾಗ ಅಪ್ಪನ ಮುಖದಲ್ಲಿ ಖುಷಿಯಿತ್ತು.." ಪಾಪ ನಮ್ಮನೆ ತಂಗಿ ಹತ್ರ  ಮೊಬೈಲ್ ಇಲ್ಲೆ  ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ.. ಅಮ್ಮನ ತೋಳಿನಲ್ಲಿ ಅತ್ತು ಬಿಟ್ಟಿದ್ದೆ..."ನಿಂಗೆ ಮನೆ ಬೇಜಾರ್ ಬಂದ್ರೆ ಒಂದು ಫೋನ್ ಮಾಡು ನಂಗೋ ಇಬ್ರೂ ಅಲ್ಲಿ ಒಂದು ದಿನದಲ್ಲೇ ಬತ್ಯೋ" ಎಂದಾಗ ಸ್ವಲ್ಪ ಖುಷಿಯಾಯಿತು..ಅಂತೂ ಹೊರಟೆ..
ಅಂದು ಕಾಲೇಜಿನ ಮೊದಲನೇ ದಿನ ಜೊತೆಗೆ ನನ್ನ ಜನುಮದಿನ...ಗೊತ್ತಿಲ್ಲದ ಕಾಲೇಜಿನಲ್ಲಿ ಶುಭಾಷಯ ಹೇಳುವವರು ಯಾರೂ ಇರಲಿಲ್ಲ..ಆದರೂ ಸಂಭ್ರಮವಿತ್ತು ಕೆಲವೇ ದಿನಗಳಲ್ಲಿ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ..ಐಡಿ ಕಾರ್ಡಿನ ಮೇಲೇ ವ್ಯಾಲಿಡಿಟಿಯನ್ನು ನೋಡುತ್ತ ದೇವ್ರೇ ಇನ್ನೂ ಮೂರು ವರುಷಗಳು ಇಲ್ಲೇ ಇರ್ಬೇಕಾ! ಎಂದೆನ್ನಿಸುತ್ತದ್ದರೂ ಬಹು ಬೇಗ ಹೊಂದಿಕೊಂಡಿದ್ದೆ..
ಆಗ ನಾನು ಅದೆಷ್ಟು ಮುಗ್ಧಳಾಗಿದ್ದೆಯೆಂದರೆ ಯಲ್ಲಾಪುರದವರು ಉಜಿರೆಯಲ್ಲಿ ಯಾರಾದ್ರೂ ಇದ್ರೆ ಸಾಕು ಗೊತ್ತಿಲ್ದೇ ಇದ್ರೂ ಹೋಗಿ ಮಾತನಾಡಿಸುತ್ತಿದ್ದೆ...ನನ್ನ ರೂಂಮೇಟ್ ಇದೇ ಕಾರಣಕ್ಕೆ ಯಾವಾಗಲೂ ಹೇಳ್ತಾ ಇರ್ತಿದ್ಲು.."ಏನೇ ಯಲ್ಲಾಪುರದ್ದೇನಾದ್ರೂ ಸಂಘ ಶುರು ಮಾಡ್ತೀಯ ಹೆಂಗೆ" ಎಂದು..  ಪ್ರತೀ ರಜಾದಿನಗಳಲ್ಲಿ ಧರ್ಮಸ್ಥಳ  ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದೆವು..ಕ್ಲಾಸಿನಲ್ಲಿ ಚುಕ್ಕಿ ಆಟ ಆಡುತ್ತಿದ್ದ ಸಂಭ್ರಮವಂತೂ ಹೇಳತೀರದು..
ಮೂರು ವರುಷಗಳು ಅದೇಗೆ ಕಳೆಯಿತೋ ...ಒಂದೂ ಗೊತ್ತಿಲ್ಲ ..ದಿನಗಳು ಯಾರಿಗೂ ಕಾಯದೇ ಕಳೆದುಬಿಡುತ್ತವೆ...
ಮತ್ತದೇ ಪ್ರಶ್ನೆ ಮುಂದೇನು? ಎಂಬುದು....
ಕಾಲ,ಸಮಯ, ದಿನಗಳು ಒಂದೊಂದಾಗಿ ಉರುಳುತ್ತ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತೆ..ಮೊದಲು ಅದೇಗೆ ಇಲ್ಲಿರಬೇಕೋ..ಎಂದುಕೊಂಡರೂ ನಂತರದ ದಿನಗಳು ಇಲ್ಲಿಂದ ಬಿಟ್ಟು ಹೋಗಬೇಕಲ್ಲ ಎಂಬ ಬೇಸರ..
ನಮ್ಮೊಳಗೇ ಇದ್ದ ಚಿಕ್ಕಪುಟ್ಟ ಖುಷಿಗಳು, ಬೇಸರಗಳು, ಸಾಂತ್ವನದ ಮಾತುಗಳು ಖುಷಿಯನ್ನು, ಬೇಸರವನ್ನು ತಂದುಕೊಂಡುತ್ತೆ..
ಎಲ್ಲದಕ್ಕೂ ಕಾರಣ ಮನಸ್ಸೇ....ಅದೇಕೋ ಒಂದು ರೀತಿಯ ಬೇಸರ ಜಿರೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು...

27 comments:

  1. " ಅದ್ಹೇಗೆ ಕಳೆಯಿತೋ " ಎಂಬ ಈ ನಿನ್ನ ಶೀರ್ಷಿಕೆಯ ವಾಕ್ಯವನ್ನು ಜೀವನ ಪರ್ಯಂತ ಹೇಳುತ್ತಲೇ ಇರುತ್ತೇವೆ ಪುಟ್ಟಿ .. ಈಗ ನಾವುಗಳು ಹೇಳುತ್ತಿರುವಂತೆ. ಈಗೆಲ್ಲ ಪ್ರತಿದಿನ ಅಯ್ಯೋ routine life ಬಿಡಪ್ಪ ಎನ್ನುವ ಮಾತು ಆ ದಿನಗಳಲ್ಲಿ ಒಮ್ಮೆಯೂ ಬಂದಿರಲಿಲ್ಲ ... ಅಷ್ಟಲ್ಲದೆ ಹೇಳುತ್ತಾರ "Student life is golden life " ಅಂತಾ . any way ಮತ್ತೊಂದು ಜೀವನದ ಮಟ್ಟಿಲಿಗೆ ಹತ್ತಿರ ನೀನು All the Best ...

    ReplyDelete
    Replies
    1. ಹೌದಲ್ವಾ ಅಕ್ಕ... ಜೀವನದ ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಹೋಗುವಾಗ ಹೇಳುವ ಮಾತುಗಳೆ ಇಂತಹದು....ಅದೇನೋ ಒಂಥರಾ ಖುಷಿ ಇರತ್ತೆ
      ಧನ್ಯವಾದಗಳು....:)

      Delete
  2. ಯಾವುದನ್ನೊ ಬೇಡವೆಂದಿರುತ್ತೇವೆ.. ಅನಿರೀಕ್ಷಿತವಾಗಿ ಅದು ನಮ್ಮ ಜೀವನಕ್ಕೆ ಕಾಲಿಡುತ್ತೆ.. ಬರಸೆಳೆದು ಅಪ್ಪುತ್ತೆ..ಹೊಂದಿಕೊಂಡು ಬಿಡುತ್ತೇವೆ.ಅಷ್ಟರಲ್ಲಿ ಆ ಬಂಧನದಿಂದ ಬಿಡಿಸಿಕೊಳ್ಳಲೇ ಬೇಕು ಅನ್ನುವ ಪರಿಸ್ಥಿತಿ ದುತ್ತನೆ ಎದುರಾಗತ್ತೆ.ಮತ್ತೇ ಮನಸ್ಸಿನ ನಿರಾಕರಣೆ.. ಬದುಕು ತುಂಬಾ ಸ್ಟ್ರಿಕ್ಟ್. ಅದು ಮನಸ್ಸಿನ ಮಾತು ಕೇಳುವುದಿಲ್ಲ.. ಅದು ಕಾಲಿಟ್ಟಂತೆ ನಾವು ಅದರ ಹಿಂದೆ ನಡೆಯುತ್ತಲೇ ಇರಬೇಕು..ಅದು ಅನಿವಾರ್ಯ..

    ನೀವು ಸದ್ಯ ಅದೇ ಅನಿವಾರ್ಯತೆಯಲ್ಲಿದ್ದಿರಾ.. ಇಲ್ಲಿಂದ ಕಳಚಿಕೊಂಡು ಮುಂದೆಲ್ಲೋ ಹೆಜ್ಜೆ ಇಕ್ಕುತ್ತಿರಿ.. ಆಗ ಮತ್ತೊಂದು ಚಂದದ ಸ್ನೇಹಗಳು ಜೊತೆಯಾಗುತ್ತದೆ. ಖುಷಿಯಾಗಿರಿ. ಚಂದದ ಬರಹ.. ಆಲ್ ದಿ ಬೆಸ್ಟ್...
    -ಸುಷ್ಮಾ ಮೂಡುಬಿದರೆ..

    ReplyDelete
    Replies
    1. ಅನಿರೀಕ್ಷೆಯ ಬದಲಾವಣೆಗಳಿಗೆ ಹೊಂದಿಕೊಳ್ಳುತ್ತ ಸಾಗಲೇಬೇಕು......
      ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ಜೀವನ ಅಲ್ವಾ....
      ಧನ್ಯವಾದಗಳು ........

      Delete
  3. ಜಗತ್ತಿನಲ್ಲಿ ನಡೆವ ಬದಲಾವಣೆಗಳು ಎಷ್ಟು ಅನ್ನಿಸುತ್ತೆ..ಮೊದಲು ಹೊಂದಿಕೊಳ್ಳೋದು ಕಷ್ಟ ಅನ್ನಿಸುತ್ತೆ...ನಂತರ ಬಿಡೋಕೆ ಕಷ್ಟ ಎನ್ನಿಸುತ್ತೆ. ಕಾಲೇಜು ದಿನಗಳ ಮಜಾ, ಸ್ವಲ್ಪ ಸಿಕ್ಕ ಸ್ವಾತಂತ್ರ್ಯದ ರೆಕ್ಕೆ.. ಓದು, ಸ್ನೇಹದ ಮಡಿಲು, ಹರಟೆ ಎಲ್ಲವೂ ಒಂದು ಸುವರ್ಣ ಪುಟವನ್ನು ನಮಗಾಗಿ ಮೀಸಲಿಡುತ್ತದೆ.ಜೀವನಕ್ಕೆ ಒಂದು ಭದ್ರ ಬುನಾದಿ ಹಾಕಿಕೊಡುವ ಈ ೩-೪ ವರ್ಷಗಳು ಜೀವನದ ನಂದನವನಕ್ಕೆ ಕಂಪು ತಂಪು ನೀಡುವ ಸುಂದರ ಸಸಿಗಳನ್ನು ನೆಟ್ಟು ನೀರೆರೆಯುತ್ತವೆ. ಸುಂದರ ಲೇಖನ. ಆ ದಿನಗಳಿಗೆ ನಮ್ಮನ್ನು ಕೊಂಡೊಯ್ಯುವ ನಿಮ್ಮ ಲೇಖನ ಬಹಳ ಖುಷಿ ಕೊಟ್ಟಿತು.

    ReplyDelete
    Replies
    1. ಧನ್ಯವಾದಗಳು.......ಚಂದದ ಸಾಲುಗಳ ಕಾಮೆಂಟ್..:)

      Delete
  4. ಬದುಕಿಗೆ ಇಂಥ ಅನಿವಾರ್ಯತೆಗಳು ಇಲ್ಲದಿದ್ದರೆ ಬದುಕು ಖಂಡಿತವಾಗಿಯೂ ರೂಟೀನ್ ಆಗಿಬಿಡುತ್ತಿತ್ತು.
    ಒಂದೊಂದು ಪರಿಸರವನ್ನು ಕಳಚಿಕೊಂಡು ಮತ್ತೊಂದಕ್ಕೆ ಹೋದಂತೆಲ್ಲಾ ಹೊಸ ಹೊಸ ಅನುಭವಗಳು
    ಹೊಸ ಹೊಸ ಬಂಧಗಳು ಬೆಸೆದು ಆತ್ಮೀಯವಾಗಿಬಿಡುತ್ತವೆ...
    ಹೇಗೆ ಕಳೆಯಿತೋ ಅಂತಲ್ಲಾ ಏಕೆ ಕಳೆಯಿತೋ ಅಂತಾ ಪ್ರತಿ ಸಲವೂ ನಾವು ಅಂದುಕೊಳ್ಳುವಂತೆ
    ಮಾಡಿಬಿಡುತ್ತದೆ.

    ." ಪಾಪ ನಮ್ಮನೆ ತಂಗಿ ಹತ್ರ ಮೊಬೈಲ್ ಇಲ್ಲೆ ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ. ಖರೆಯ ಮಾತು ಮತ್ತೆ ಖುಷಿ ಅನಿಸಿತು.
    ಚಂದದ ಬರಹ.



    ReplyDelete
    Replies
    1. ಹೌದಲ್ದ ....ಒಂದೊಂದು ಪರಿಸರಗಳು ಒಂದೊಂದು ಅನುಭವಗಳನ್ನು ಕಟ್ಟಿಕೊಡುತ್ತೆ..

      ನಿಜವಾಗಲೂ ಯಾಕಾದ್ರೂ ಕಳೆಯಿತೋ ಎನ್ನುವಷ್ಟು ಬೆರೆತು ನಮ್ಮದೇ ಊರು ಎನ್ನುವಷ್ಟು ಹೊಂದಿಕೊಂಡು ಬಿಟ್ಟಿರುತ್ತೇವೆ

      ಧನ್ಯವಾದಗಳು:)

      Delete
  5. ಛಂದದ ಬರಹ :)...
    ನಾನು ಕೊನೆಯ ಸೆಮಿಸ್ಟರ್..
    ಅಪ್ಪನ ಜೊತೆಗೆ ಬೆರೆಗುಗಣ್ಣಿನಿಂದ ಆಚೀಚೆ ನೋಡುತ್ತಾ ಚಿಕ್ಕಮಗಳೂರು ತಲುಪಿದ್ದು ಇನ್ನೂ ನೆನಪಿದೆ..
    ಹಮ್...ಒಂದಿಷ್ಟು ನೆನಪುಗಳು..ಜೊತೆಗೊಂದಿಷ್ಟು ಗೆಳೆತನಗಳು...
    ಕೊನೆಗೆಂದೆರಡು ಸರ್ಟಿಫಿಕೇಟುಗಳು...
    ಮುಂದಿನ ಹಾದಿ ಎಲ್ಲೋ....
    ಇಷ್ಟವಾಯ್ತು ಬರೆಹ...
    ನನ್ನದೂ ಸಧ್ಯ ಇದೇ ಕಥೆ..
    ನನ್ನ ಬರಹಕ್ಕೂ ಇದು ಸ್ಪೂರ್ತಿಯಾಗಲಿ...
    ನಮಸ್ತೆ :)

    ReplyDelete
    Replies
    1. ಜೊತೆಗೂಡಿದ ನೆನಪುಗಳೊಡನೆ ಸಾಗುತ್ತಿರುವುದು ಬದುಕು...ಜೀವನದ ಪಯಣದಲಿ ಸಿಗುವ ಕೆಲವು ಅಪರೂಪಗಳೆಂದರೆ ಇಂತಹ ಬದುಕು ಇರಬಹುದೇನೋ..
      ಧನ್ಯವಾದಗಳು ....:)

      Delete
  6. ಪದ್ಮಾ -
    ಹೇಗೆ ಕಳೆಯುವುದೋ ಎನ್ನುವುದರಿಂದ ಹೇಗೆ ಕಳೆಯಿತೋ ಎನ್ನುವುದರೆಡೆಗೆ ಪ್ರತಿ ಕ್ಷಣವೂ ಸಾಗುತ್ತಿರುತ್ತೇವೆ...
    ಪ್ರತಿ ಕ್ಷಣವೂ ಹೊಸತೇ ಮತ್ತು ಹೊಸ ಕ್ಷಣಕ್ಕೆ ತರೆದುಕೊಳ್ಳುವುದು ಅನಿವಾರ್ಯ...
    ಅದು ಬದುಕು...ಅದೇ ಬದುಕು...
    ಚಂದದ ಬರಹ...

    ReplyDelete
    Replies
    1. ಹಮ್ ಹೌದು....ಪ್ರತೀ ಕ್ಷಣವೂ ಪ್ರತೀ ದಿನವೂ ಹೊಸತು....ಕಳೆದು ಹೋದ ದಿನಗಳ ಮೇಲೆಯೇ ಹೊಸತನವು ನಿಂತಿದೆ..ಸಮಯ ಯಾರಿಗಾಗಿಯೂ ಕಾಯಲಾರದು,ಸಮುದ್ರದ ಅಲೆಗಳಂತೆ...ಬದಲಾವಣೆಗಳು ಇರಲೇಬೇಕು ಅಲ್ವಾ
      ಧನ್ಯವಾದಗಳು..:)

      Delete
  7. ನಿಮ್ಮದೇ ಒಂಥಾರ ಚೆಂದ ಕಣ್ರೀ. ಒಂದೂರಿನಿಂದ ಮತ್ತೊಂದೂರಿಗೆ ಓದಲಿಕ್ಕೆ ಬಂದ್ರಿ, ಹೊಸ ಅನುಭವ, ಹೊಸ ಪರಿಸರ,ಹೊಸ ಜನ. ಬೆಂಗೂಳೂರಿನಲ್ಲೇ ಗೂಟ ಹೊಡೆಕೊಂಡಿರೋ ನಂಗೆ ಬೇರೆಲ್ಲಾದರೂ ಹೋಗಬೇಕಂತ ಆಸೆ. ನಾನು ನನ್ನ ಡಿಗ್ರಿ ಮುಗಿದಾಗ ಅಪ್ಪನ ಮುಂದೆ ನಿಂತಿದ್ದೆ, ನನ್ನ ಮೈಸೂರಿಗೆ ಕಳಿಸು ಓದಲಿಕ್ಕೆ ಅಂತ. ಬೆಂಗಳೂರಿಗಿಂತ ಊರು ಬೇಕ ಅಂತ ಇಲ್ಲೇ ಉಳಿಸಿಕೊಂಡರು..ಈಗಲೂ ಚಾನ್ಸ್ ಸಿಕ್ಕಿದರೆ ಬೇರೆ ಊರಿಗೆ ಹಾರಿಕೊಂಡು ಹೋಗಲಿಕ್ಕೆ ರೆಡಿ ನಾನು... ಚೆಂದಕ್ಕೆ ಬರೆದ್ದಿದೀರಿ :)
    - ರಶ್ಮಿ

    ReplyDelete
  8. Badalavanege takkange navu badalagale beku...yakendre nammannu tuliyuttareno emba bhavane nammalli edde erutte...!! Sahajavagi 3 varsha jotegidda geleyaru yavagalu namma manassalle eruttare...namma guru vrandadavaru kufa yavdo ondu bageyalli ( bayya vishayadLlo or olle vishayadLlo) yavagalu nenapiruttare..namma jote jivan ennuvakkinta jivanadalli navu eshto olledu...nimma anisikegalu nangu kuda kelavu vishayagalannu nenapu madta ede...dhanyavada

    ReplyDelete
    Replies
    1. ಬದಲಾವಣೆಗೆ ತಕ್ಕಂತೆ ಬದಲಾಗಲೇಬೇಕು...ಎಂದೋ ಪರಿಚಯವಾದ ಗೆಳತಿಯರು ಮನದ ಆಳದಲಿ ಇರುತ್ತಾರೆ...ಬದುಕಿನುದ್ದಕ್ಕೂ ನೆನಪುಗಳು ಮಾತ್ರ ಜೊತೆ ಜೊತೆಗೆ ಸಾಗುತ್ತಿರುತ್ತೆ..
      ಧನ್ಯವಾದಗಳು:)

      Delete
  9. ಪರಿವರ್ತನೆ ಜಗದ ನಿಯಮ.. ಜೀವನ ಹರಿಯೋ ನದಿ ಹಾಗೆ. ಈಗ ಮುಂದೆ ಹೊಗುತ್ತಿರಬೆಕು.. ಅದೇ ನದಿಗೆ ಸೊಬಗು.... ಹಾಸ್ಟೆಲ್ ಲೈಫ್ ಅನ್ನು ಬಿಟ್ಟು ಹೋಗುವಾಗ ಈ ಪ್ರಶ್ನೆ ಸಾಮಾನ್ಯ ... ನೀವು ಉಜಿರೆ ಅಂತ ಸ್ಥಳದಲ್ಲಿ ಒದಿದ್ದಿರಿ... ನಿಜಕ್ಕೂ ಅದೊಂದು ಸುಂದರ ಜಾಗ... ಅಲ್ಲಿನ ನೆನಪುಗಳು ಎಂದಿಗೂ ನಿಮ್ಮನ್ನು ಕಾಡುತ್ತಿರುತ್ತವೆ.. Wish you good luck...

    ReplyDelete
  10. ಖಂಡಿತ ಹೌದು..ಉಜಿರೆ ಸುಂದರವಾದ ಸ್ಥಳ...ಮೂರು ವರುಷಗಳು ಮುನ್ನೂರು ವರುಷಗಳಷ್ಟು ನೆನಪುಗಳನ್ನು ಕಟ್ಟಿಕೊಟ್ಟಿದೆ..
    ಧನ್ಯವಾದಗಳು ಸರ್

    ReplyDelete
  11. ಚೊಲೊ ಬರಿದ್ಯೇ..

    ಮುಂದಿನ ಓದನ್ನು ಧಾರವಾಡದ ಕಡೆ ಬೆಳೆಸಿಬಿಡು..ನಾನು ಜೋತೆಕೊಡುವೆ ನನ್ನ ಪದ್ದುಗೆ..

    ನಿನ್ನೆಗಿಂತ ಇಂದು ಚೆನ್ನ..ಇಂದಿಗಿಂತ ನಾಳೆ ಇನ್ನು ಹೊಸದು..ಆಶವಾದಿಗಳಗಿ ಮುಂದುವರೆಯುತಿರಬೇಕು.. all d best..

    ReplyDelete
    Replies
    1. ಹೌದು ..ಒಂದು ದಿನಕ್ಕಿಂತ ಇನ್ನೊಂದು ದಿನಕ್ಕೆ ಭರವಸೆಗಳು, ಆಲೋಚನೆಗಳು ಹೆಚ್ಚುತ್ತಿದ್ದಾಗ ಬದುಕು ಸುಂದರ:

      Delete
  12. Hm nijakkoo puper kane nin baraha... Bhavanegalannella kalkibidatthe... innoo bari... all the best..

    ReplyDelete
  13. ಸರಳವಾಗಿ ಓದಿಸಿಕೊಂಡು ಹೋಗುವ ನಿಮ್ಮದೇ ಅನುಭವದ ಕಥಾನಕ ಚನ್ನಾಗಿ ಮೂಡಿದೆ. ಆ ಮೂರು ವರ್ಷಗಳ ಅವಧಿಯ ನಡುವಲ್ಲಿ ನಡೆದಿರುವ ಕುತೂಹಲ ಘಟನೆಯನ್ನು ಹೇಳಿ ಮತ್ತಷ್ಟು ಸ್ವಾರಸ್ಯಕರವಾಗಿ ಬರೆಯುವ ಅವಕಾಶವಿತ್ತು ಅನ್ನಿಸುತ್ತಿದೆ.
    a few seconds ago · Like

    ReplyDelete
    Replies
    1. ಹೌದು ಸರ್...ನನಗೂ ಬರೆದಾದ ಮೇಲೆ ಹಾಗೇ ಅನ್ನಿಸಿತ್ತು....ಮೂರು ವರುಷಗಳಲ್ಲಿ ಕಳೆದದ್ದನ್ನು ಎಷ್ಟೊಂದು ಬರೀಬಹುದಿತ್ತು ಇಷ್ಟೇ ಚಿಕ್ಕ ಯಾಕೆ ಬರೆದೆ ಎಂದು......
      ನಿಮ್ಮ ಸಲಹೆಗಳು ಸೂಚನೆಗಳು ನಮ್ಮಂತವರಿಗೆ ಅಗತ್ಯವಿದೆ ಸರ್...
      ಹೀಗೇ ಬರುತ್ತಿರಿ..ಖುಷಿಯಾಯಿತು:)
      ಧನ್ಯವಾದಗಳು...

      Delete
  14. ಹೌದು, ಅನಿವಾರ್ಯ ಕಾರಣಗಳಿಂದ ನಾವು ಮಾಡುವ ಕೆಲಸಗಳು, ನಾವು ಹೋಗುವ ಸ್ಥಳಗಳು, ನಾವು ಕಟ್ಟಿಕೊಳ್ಳುವ ಸಂಬಂಧಗಳು ಸಮಯ ಕಳೆದಂತೆ ನಮಗೆ ಆಪ್ತವಾಗಿ ಬಿಡುತ್ತವೆ . ಆಪ್ತವಾದ ಮೇಲೆ ಮತ್ತೆ ಕೆಲವು ಕಾಲದ ನಂತರ ಅವುಗಳನ್ನು ಬಿಟ್ಟು ಬರುವ ಅನಿವಾರ್ಯತೆ ನಮ್ಮ ಎದುರಿಗೆ ಬರುತ್ತದೆ...ಇಂಥ ಪರಿಸ್ಥಿತಿ ಪರತಿಯೊಬ್ಬರ ಜೀವನದಲ್ಲೂ ಒಂದಲ್ಲ ಒಂದು ಸಲ ಬಂದೇ ಬರುತ್ತದೆ. ನಿಮ್ಮ ಭಾವನೆಗಳನ್ನು ಸುಂದರವಾಗಿ ಬಿಚ್ಚಿಟ್ಟಿದ್ದೀರಿ . ಸುಂದರ ಭವಿಷ್ಯ ನಿಮ್ಮನ್ನು ಕಾದಿದೆ.... ಶುಭವಾಗಲಿ ....

    ReplyDelete
  15. ನಿಮ್ಮದು ಬಿಟ್ಟು ಹೋಗೋ ನೋವು ..ನನ್ನದು ಬಿಟ್ಟು ಬಂದ ನೋವು ..ಬಹುಶಃ ನಾಲ್ಕು ವರ್ಷ ಮುಗಿಯೋ ಹೊತ್ತಿಗೆ ನನ್ನದೂ ಇದೇ ಭಾವವಾಗಿ ಬದಲಾಗುತ್ತೇನೋ ...
    ಚಂದದ ಬರಹ ..ಇಷ್ಟವಾಯ್ತು

    ReplyDelete
  16. super :) college days nenapatu :) :(

    ReplyDelete