Thursday, September 26, 2013

ಬೆಳದಿಂಗಳಲ್ಲೊಂದು ಒಂಟಿತನ

ಅದೊಂದು ಸುಂದರ ಬೆಳದಿಂಗಳ ರಾತ್ರಿ... ತಂಪು ತಂಗಾಳಿ ಮನದಲಿ ಸೋಕುತ್ತಿರಲು ಕನಸುಗಳ ಪದಗುಚ್ಚವು ಕವಲೊಡೆದು ಬಂದಿತ್ತು...ನಕ್ಷತ್ರಗಳನ್ನು ಎಣಿಸುತ್ತ, ಎಣಿಸುತ್ತ ಚಂದಿರನ ನಗೆಯನ್ನು  ನೋಡುತ್ತಿದ್ದೆ...ಭಾವನೆಗಳ ಹೊಸ್ತಿಲು ನೆಲಕ್ಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ...ಆಗಲೇ ಕಾಡುವ  ಒಂಟಿತನ....ಅದೆಷ್ಟು ಅದ್ಭುತ ಎಂದರೆ ನನ್ನ ಮನಸ್ಸನ್ನು ನಾನೇ ಅರ್ಥಮಾಡಿಕೊಳ್ಳಲು, ಹೊಸ ಕನಸುಗಳಿಗೆ ಜಾಗ ಮಾಡಿಕೊಡಲು, ಒಬ್ಬಂಟಿಯಾಗಿ ಮಾತ್ರ ಆ ಜಗಕ್ಕೆ ಹೋಗಲು ಸಾಧ್ಯ..ಓ ಕನಸುಗಳೇ ನೀವೆಂದು ನನಸಾಗಿರುವಿರೆಂದು ಕೇಳುವುದು ನನ್ನ ಒಂಟಿತನದಲ್ಲಿಯೆ.....ಯಾಕೋ ಏನೋ ಆ ಬೆಳದಿಂಗಳ ರಾತ್ರಿಯಲಿ ಚಂದಿರನಿಗಿಂತಲೂ ನನ್ನ ಕನಸುಗಳೇ ಸುಂದರವಾಗಿ ಕಂಡಿದ್ದವು..ಚಂದಿರನ ಜೊತೆಗೆ ನನ್ನ ಕನಸುಗಳನ್ನು ಹೋಲಿಸಿಕೊಳ್ಳುತ್ತ  ಒಬ್ಬಳೇ ಕೂತುಬಿಟ್ಟೆ....ರಾಯರು ಬಂದರು ಹಾಡೇಕೋ ನೆನಪಾಗುತ್ತಿತ್ತು..ಮುಂಬಾಳ ಸವಿಗನಸನು ಹೆಣೆಯಲು ಆ ಚಂದ್ರನೂ ನಸುನಕ್ಕು ಬೆಳಕನ್ನು ಹರಿಸಿದನು..

.ಅದೇ ಬೆರಗಾಗಿ ಸಾಗಿದಷ್ಟು ದೂರ ದೂರ ಕಂಗಳು ಮಿಟಿಮಿಟಿಸುತ್ತಿತ್ತು..ಒಂದು ಕವನವನ್ನು ಬರೆಯೋಣವೆಂದರೆ ಪದಗಳ ಮಿತಿಯೇ ತಾಕದಲ್ಲ.ಕೆಲವೊಂದು ದಿನವೇ ಅಷ್ಟು ಸುಂದರವಾಗಿರುತ್ತೆ..ಕಾರಣವೇನೆಂದು ಗೊತ್ತಿರುವುದಿಲ್ಲ..ಆದರೆ ಭಾವಗಳು ಎದ್ದು ಓಡಾಡುತ್ತಿರುತ್ತವೆ. ಸಣ್ಣಗೆ ಬೀಳುತ್ತಿದ್ದ ತುಂತುರು ಮಳೆಗೆ ಸಾಟಿಯಾಗುವೆಯೇನೋ ಎಂಬಂತೆ ''ತುಂತುರು ಅಲ್ಲಿ ನೀರ ಹಾಡು ಕಂಪನಾ ಇಲ್ಲಿ ಪ್ರೀತಿ ಹಾಡು'' ಎಂಬ ಹಾಡನ್ನು ಗುನಿಗುನಿಸುತ್ತಿತ್ತು ಮನಸ್ಸು..ಮಿಂಚಿನ ಒಂದು ಬೆಳಕು ಮನದಲ್ಲಿ ಸುಳಿಯದಿದ್ದರೂ ದೂರದಿಂದಲೇ ನೋಡಿ ಖುಷಿಪಡುವಂತೆ ಮಾಡಿತ್ತು.ಒಂಟಿತನವೆಂಬುದು ಮನಸ್ಸನ್ನು ಹಾಡಿಸಿ, ಕೇಳಿಸಿ ಎಂದೋ ಓದಿದ ಸರ್ದಾಜಿಯ ಜೋಕನ್ನು ನೆನಪು ಮಾಡಿಸಿ ದೊಡ್ಡದಾಗಿ ಒಬ್ಬಳೇ ನಗುವಂತೆ ಮಾಡಿತ್ತು...ಒಂಟಿತನದ ಸೋನೆ ಮಳೆಯು ಹೃದಯವು ಒದ್ದೆಯಾಗದಂತೇ ತಡೆದು, ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ ಎಂದು ದಾರಿಹೋಕರ ಮೊಬೈಲ್ ನಿಂದ ಮತ್ತೊಂದು ಪದ್ಯ ಕೇಳಿದೊಡನೆ, ಬೆಳಕು ಶುಭ್ರವಾಗಿ ಮುಖದ ಮೇಲೆಯೇ ಬಿದ್ದಿತು.

ಸಮಯ ಇನ್ನು ಹತ್ತಾದರೂ ನೆಚ್ಚಿತೊಂದು ಬೆಟ್ಟದ ಕನಸುಗಳು, ಬೇಕುಬೇಡಗಳು, ಕಷ್ಟ ಸುಖಗಳೆಲ್ಲ ಸೇರಿ ಅದೇನೋ ಹೊಸ ರೂಪ..ಎಲ್ಲರೂ ಹೆದರುವ ಒಂಟಿತನದಲ್ಲಿ ಇಷ್ಟೊಂದು ಹಿತವಿದೆಯಾ? ಎಂದು ಆ ಸಮಯಕೆ ತೋಚದಿರಲಿಲ್ಲ..ಎಲ್ಲರೂ ಬೇಡ ವೆಂದು ದೂಡುತ್ತ ಕಳುಹಿಸುವ  ಒಂಟಿತನಕ್ಕೂ ತನ್ನದೇ ಆದ ಭಾವಗಳಿವೆ, ಮನಸುಗಳನು ಓದುವ ಸಾಮರ್ಥ್ಯವಿದೆ..ಎಷ್ಟೋ ಆಗದಿರುವ ಕೆಲಸವನ್ನು ಯೋಚಿಸಿ ಪೂರ್ಣಗೊಳಿಸುವ ಅದ್ಭುತ ಶಕ್ತಿಯಿದೆ..

ಆದರೆ ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕಷ್ಟೆ..ಕೆಲವೊಂದು ಬಾರಿ ಅನಿಸುವುದು ಬೇಸರವೆಂದರೆ ನಮ್ಮ ಮನದ ಯೋಚನೆಗಳು ಋಣಾತ್ಮಕವಾಗಿ ಹರಿದಾಗ..ಆದರೆ  ಸ್ನೇಹ, ಪ್ರೀತಿ, ವಿಶ್ವಾಸದ ಸುಖದಲ್ಲಿ ಪ್ರೀತಿ ಪಾತ್ರದವರೆಡೆ ಯೋಚಿಸಲು ಸಮಯವನ್ನು ಮೀಸಲಿರಸಬೇಕೆಂದರೆ  ಅದು ಒಂಟಿತನದಲ್ಲಿಯೇ....


14 comments:

 1. ಒಂಟಿತನವೂ ಒಂದು ವರವಂತೆ ಆದ್ರೆ ಅದನ್ನ ನಾವಾಗೇ ತಂದುಕೊಂಡರೆ ಮಾತ್ರ..

  ಅಂಥದ್ದೊಂದು ಒಂಟಿತನವನ್ನು ತುಂಬಾ ಚೆನ್ನಾಗಿ ಅನುಭವಿಸಿ ಬರೆದದ್ದು ಚಂದವಿದೆ ಪುಟ್ಟಿ ...

  ReplyDelete
  Replies
  1. ಧನ್ಯವಾದಗಳು ಸಂಧ್ಯಕ್ಕ....

   Delete
 2. ಪದ್ಮಾ.....
  ಕೆಲವೊಮ್ಮೆ ಒಂಟಿತನ ನಮ್ಮ ಕಾಡುತ್ತೆ....
  ಇನ್ನು ಕೆಲವೊಮ್ಮೆ ಒಂಟಿ ತನಕ್ಕಾಗಿ ಮನಸ್ಸು ಕಾಡುತ್ತೆ...

  ನಮ್ಮಿಷ್ಟದಿಂದ ನಾವು ತಂದುಕೊಳ್ಳೋ ಒಂಟಿತನ ಮನಸ್ಸನ್ನು ಮೃದು ಮಾಡುತ್ತೆ...
  ಇಲ್ಲಾ ಮನಸ್ಸಿಗೇನೋ breaking news ಸಿಕ್ಕಾಗ ಇಂಥಾ ಸಂದರ್ಭಕ್ಕೆ ಮನಸ್ಸು ಕಾಯುತ್ತೆ...
  ಕಾಣೋ ಆಕಾಶದಲ್ಲೂ ... ಬೀಸೋ ಗಾಳಿಯಲ್ಲೂ ಚಿತ್ತಾರ ಬಿಡಿಸುತ್ತೆ.....

  ನೋಡು ನಿನ್ನ ಒoಟಿತನದ ಕನಸುಗಳು ಎಷ್ಟು ಚನ್ನಾಗಿ ಪೋಣಿಸಿವೆ ಭಾವಗಳನ್ನು....

  ಚಂದ ಚಂದ.....

  ReplyDelete
  Replies
  1. ಹೌದಲ್ವ... ಕೆಲವೊಮ್ಮೆ ನಾವು ಒಂಟಿ ಎಂದೆನಿಸುತ್ತಿರುತ್ತದೆ.. ಇನ್ನು ಕೆಲವೊಮ್ಮೆ ಒಂಟಿ ತನವೇ ಖುಷಿ ಕೊಡುತ್ತೆ..
   ಧನ್ಯವಾದಗಳು ರಾಘಣ್ಣ

   Delete
 3. ಪದ್ಮಾ -
  ಒಬ್ಬಂಟಿಯಾಗಿರುವಾಗ ಒಂಟಿ ಒಂಟಿ ಅನ್ನಿಸಿದರೆ ಅದು ನೋವಂತೆ ಕಾಡುವ ಒಂಟಿತನ...ಆಗಲ್ಲಿ ಕನಸುಗಳು ಬೆಚ್ಚಗೆ ತಬ್ಬಿ ಮನಸು ಉಬ್ಬಿದರೆ ಅದು ನಲಿವಾಗಿ ಹಾಡುವ ಏಕಾಂತ... ಒಂಟಿಯಾಗಿರುವಾಗ ಒಂಟಿ ಭಾವ ಕಾಡದಂತೆ ಕನಸುಗಳ ಮನಸಿಗೆಳೆದುಕೊಂಡು ಹಿತವಾದ ಏಕಾಂತವ ಸೃಷ್ಟಿಸಿಕೊಳ್ಳಬಲ್ಲೆವಾದರೆ ಚಂದಿರ ತಾರೆಯರೇನು ಕೋಣೆಯೊಳಗಣ ಗಾಢ ಕತ್ತಲು ಕೂಡ ಹಿತವೇ...
  ಚಂದದ ಭಾವ ಬರಹ ಕಣೇ...

  ReplyDelete
  Replies
  1. ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು .....

   Delete
 4. Replies
  1. dhanyavaadagalu akshay....blog ge bandiddak khushy aaytu

   Delete
 5. ನನ್ನ ಬ್ಲಾಗ್ ಗೆ ಭೇಟಿ ಕೊಟ್ಟದ್ದಕ್ಕೆ ಧನ್ಯವಾದ ಪದ್ಮ ಭಟ್ ರವರೆ. ಒಂಟಿತನದಲ್ಲೂ ಕೆಲವೂಮ್ಮೆ ಆನಂದವಿರುತ್ತದೆ ಎಂದು ನೀವು ಅನುಭವಿಸಿ ಬರೆದದ್ದು ನನಗೆ ಭುವನೇಶ್ವರಿ ಹೆಗಡೆಯವರ ಸಮಗ್ರ ಲಲಿತ ಪ್ರಬಂಧದಲ್ಲಿನ ಏಕಾಂತವನ್ನು ನೆನಪಿಸಿತು.

  ReplyDelete
 6. ಒಂಟಿತನವೂ ಸಹ ಒಂದು ರೀತಿಯ ಸ್ನೇಹದಂತೆ... ನಮ್ಮ ಮನಸ್ಸಿನೊಡನೆ ಮಾತನಾಡುವ, ಕನಸುಗಳ ಲೋಕಕ್ಕೆ ಲಗ್ಗೆ ಇಡುವ ಒಂದು ಸುಂದರ ಅನುಭವ... ಅದರೊಡನೆ ಬೆಳದಿಗಲಿದ್ದರಂತೂ,ವಾಹ್ .... :)
  ಒಂಟಿತನದ ಭಾವಗಳು ಬಲು ಸುಂದರವಾಗಿ ಮೂಡಿವೆ :) ಚೆಂದದ ಬರಹ ಗೆಳತಿ :) :)

  ReplyDelete
 7. ಜೊತೆ ಇದ್ದಾಗ ಹೆಜ್ಜೆಗಳು.. ಹೆಜ್ಜೆಗಳಿದ್ದಾಗ ಗುರುತುಗಳು.. ಆ ಹೆಜ್ಜೆ ಗುರುತಿನ ಗುರುತಲ್ಲಿ ಜೀವನ ಕಳೆಯುವುದು ಸುಂದರ ಅನುಭವವಾಗಬಲ್ಲದು.. ನಮ್ಮ ಮನಸ್ಸು ಎಷ್ಟು ಗಟ್ಟಿ ಅಥವಾ ಟೊಳ್ಳು ಅನ್ನುವುದು ಒಂಟಿಯಾಗಿದ್ದಾಗ ಮಾತ್ರ. ಸುಂದರ ಭಾವವುಳ್ಳ ಬರಹ

  ReplyDelete
 8. ಒಂಟಿತನದ ಹಾಡು ,ಏಕಾಂತದ ನಲಿವು .
  ಖುಷಿಸುತ್ತೆ ಮನವಿಲ್ಲಿ .
  ಅದೂ ಜನಜಂಗುಳಿಯ ನಡುವೆ ದಕ್ಕಿದ ಒಂಟಿತನವ ಖುಷಿಸೋವಾಗ ಕಲಿತಾಗಿನಿಂದ.
  ಅದ್ಯಾವುದೋ ಲಿಂಕಿಂದ ಇಲ್ಲಿ ಬಂದೆ ..ಇಲ್ಲಿಯ ಈ ಬರಹ ನಿಮ್ಮೆಲ್ಲಾ ಬರಹಗಳ ಓದೋಕೆ ನನ್ನ ದೂಕಿದ್ದು ,ಉತ್ತೇಜಿಸಿದ್ದು ಸುಳ್ಳಲ್ಲ .
  ಇಷ್ಟವಾಯ್ತು

  ReplyDelete