Tuesday, July 10, 2012

ಬಾಂಧವ್ಯದ ಸೃಷ್ಟಿ

ಬದುಕಬೇಕು ಜೊತೆಗೆ
ಉಸಿರು ಇರುವ ವರೆಗೆ
ಆ ಉಸಿರೇ ನಮ್ಮಿಬ್ಬರ ಪ್ರೀತಿಯಾಗಿ
ಕೊನೆಯ ತನಕವೂ ಬೆಸೆದಿರಬೇಕು
ಸುಮಧುರ ಬಾಂಧವ್ಯವ
ಕಾಯುವ ಪ್ರತೀ ಘಳಿಗೆಯಲ್ಲೂ 
ಇಬ್ಬರ ನಗುವಿರಬೇಕು
ಬದುಕಬೇಕು ಕಣ್ಣಲ್ಲಿ ಕಣ್ಣಾಗಿ
ಮನದಲ್ಲಿ ಮನವಾಗಿ 
ನಂಬಿಕೆ ಭರವಸೆಯೆಲ್ಲವೂ
ಹರಿಯುತ್ತಿರಬೇಕು
ಪ್ರತೀ ಕ್ಷಣದಲ್ಲೂ
ನನ್ನ ಭಾವನೆಯ ಜಗತ್ತು
ನೀನೆಂದೂ ಆಗಿ
ನಿನ್ನ ಭಾವನೆಯ ಜಗತ್ತು
 ನಾನೆಂದು ಆಗಿ
ಎಂದೆಂದು ಇರಬೇಕು ಜೊತೆಜೊತೆಯಲಿ
ನಲುಮೆಯ ಜಗದ ಒಡೆಯ
ಎಂದೂ ನೀನಾಗಿರಬೇಕು
ನಿನ್ನ ಹೃದಯದಲಿ ನನ್ನ ಪ್ರೀತಿಯ ಸೃಷ್ಟಿ
ನನ್ನ ಹೃದಯದಲಿ ನಿನ್ನ ಪ್ರೀತಿಯ ಸೃಷ್ಟಿ
ಎರಡು ಹೃದಯ ಬಡಿತವು ಒಂದು
ಕೈ ಹಿಡಿದು ಸಾಗಬೇಕು
ಕೊನೆಯತನಕವೂ ಎಂದೆಂದು













Sunday, July 08, 2012

ಬಣ್ಣದ ಆಸೆಯೇ...


ಆಕೆಗೆ ಎಲ್ಲರಂತೆ ಬದುಕುವ ಆಸೆ
ಕೆಲವರೆಲ್ಲಾ  ಖುಷಿಯಿಂದ
ನಗುನಗುತ ಮದರಂಗಿ ಹಾಕಿಸಿಕೊಳ್ಳುತ್ತಿದ್ದರೆ,
ಕೇಳುವಳು ಅಮ್ಮನ ಬಳಿಗೆ ನನಗೂ ಆ ಬಣ್ಣವ ಕೊಡಿಸೆಂದು,
ಹೇಗೆ ಕೊಡಿಸಲಿ ನಾ
ಬದುಕಿಗೆ ಬಣ್ಣ ಕೊಡಲಾಗದಿದ್ದ ಮೇಲೆ
ಎಲ್ಲಿ ಬರಬೇಕು
ಆ ಮದರಂಗಿ ಚಿತ್ತಾರಗಳು
ಬಡವರ ಪಾಲಿನ ಮದರಂಗಿಯೆಂದರೆ
ಬಣ್ಣದ ಎಲೆಯಿಂದ ಬಿಡಿಸಲೇ?
ಎಂಬ ಅಮ್ಮನ  ಉತ್ತರಕೆ
ಹಾರಿ ಹೋಗಿತ್ತು  ಅವಳ ಮದರಂಗಿಯ ಕನಸುಗಳು
ಹಣೆಯ ಬರಹವೆಂಬ ಈ ಪಟ್ಟಕ್ಕೆ
ಚಿತ್ತಾರದ ಆಸೆಗಳೆಲ್ಲವೂ
ಕೇವಲ ಕನಸುಗಳಷ್ಟೇ
ಆಟಿಕೆಯ ಸಾಮಾನು, ರೆಕ್ಕೆ ಪುಕ್ಕವಿರುವ
ಬಣ್ಣದ ಅಂಗಿಗಳನ್ನು,
ಅವಳಿಗೂ ಕೊಳ್ಳುವ ಬಯಕೆ
ಜಾತ್ರೆಯ ತೊಟ್ಟಿಲಿನಲ್ಲಿ ಆಡುವ ಆಸೆ
ಟಿ.ವಿ ಯಲ್ಲಿ ಕಾರ್ಟೂನ್ ನೋಡುವ ಆಸೆ
ಎಲ್ಲವನ್ನೂ ಕಿತ್ತುಕೊಂಡಿತೇ
ಈ ಬಡತನ
ಆ ಮುಗ್ಧ ಹುಡುಗಿಯ
ಕನಸೆಂದು ನನಸಾಗುವುದೋ.......






 

Saturday, July 07, 2012

ನೀನೇ...


ಆ ನಿನ್ನ ಒಲವು
ಬಂದಿಹುದು ಸಿಹಿ ಸ್ವಪ್ನದಲು,
ಸಿಹಿ ಜೇನಿಗಿಂತಲೂ ಸಿಹಿಯಾದ
ನಿನ್ನ ಕಾಳಜಿಯ ಪರಿಯ
ಹೇಗೆ ವರ್ಣಿಸಲಿ
ಪ್ರೀತಿಯ ಆಗಸದಿ
ಹೊಳೆಯು ನಕ್ಷತ್ರ ನೀನು
ಹುಣ್ಣಿಮೆಯ ಬೆಳದಿಂಗಳ
   ಹೊಳಪು
ಮನದ ಮಲ್ಲಿಗೆಯ ಸುವಾಸನೆ  ನೀ
ಪ್ರತೀ ಕ್ಷಣವೂ ನನ್ನ ಹೃದಯದಲಿ ಕೇಳುವ
ನಾದ ನೀನೇ
ಬೆಳಗಿ ಜಾವದ ಬೆಳಕು ನೀನು
ಇದೆಲ್ಲವೂ ನೀನೇ? ಎಂಬ ಪ್ರಶ್ನೆಗೆ  ನನ್ನ ಉತ್ತರ
ನೀನು ನೀನಲ್ಲ,
ನಾನು ನೀನಾಗಿ , ನೀನು ನಾನಾಗಿ
ನಮ್ಮದೇ ಒಲವಿನ ಲೋಕ
ಬಾಳ ನಾವಿಕ
ಬದುಕಬೇಕು ನಾವು
ಎಂದೂ ಬಾಡದ ಹೂವಾಗಿ..









Tuesday, July 03, 2012

ಕನಸುಗಳೇ...

ಕನಸು ಕಾಣುವ ಹುಡುಗಿ ನಾ
ಬಣ್ಣದ ಕನಸುಗಳು
ಮನದ ಕಡಲಿನಲಿ ಅಲೆಯಂತೆ
ತಂಗಾಳಿಯ ಆ ಸವಿಯಂತೆ
 ಕನಸುಗಳ ಹುಟ್ಟಿಗೆ ಸಮಯವೇ ಇಲ್ಲ
ಯೋಚಿಸ ಹೊರಟರೆ ಕನಸು ಮುಗಿಯುವುದೆಂದೋ
ಮುಖದಲ್ಲೊಂದು ಸಣ್ಣಗೆ ನಗು ತರಿಸುವ ಕನಸುಗಳು
ಮಾತನಾಡುತ್ತ ಎಂದೂ ಕುಳ್ಳುವ ಕನಸು
ಎಲ್ಲೆ ಉಂಟೇ ಈ ಹುಚ್ಚು ಕನಸಿಗೆ
ಅಂದುಕೊಂಡ ಕನಸೆಲ್ಲವೂ 
ನನಸಾಗಬಹುದೇ?
ಆಗಬಹುದು ಛಲವೊಂದಿದ್ದರೆ
ಭವಿಷ್ಯದ ಬಗೆಗಿನ ಕನಸು
ಅಪ್ಪ ಅಮ್ಮನ ಆಸೆಯ ನನಸು ಮಾಡುವ ಕನಸು
ಮುಗ್ಧ ಹೃದಯದಲಿ ಎಂದೂ ಮಾಸದಿರುವ ಕನಸು
ನೂರು ವರುಷವು ಬಾಳುವ ಕನಸು
ಹೇಳ ಹೊರಟರೆ ಈ ಕನಸನ್ನು
ಮುಗಿಯುವುದಿಲ್ಲ ನನ್ನ ಈ ಕನಸೆಂಬ ಹಠಮಾರಿ






Saturday, June 30, 2012

ಆ ಮುಂಜಾವು

ವಸಂತ ಕಾಲದಿ
ಮೂಡಣ ತೆರದಿ
ಹಕ್ಕಿಗಳ ಇಂಚರವು
ಸೃಷ್ಟಿಸಿತ್ತು ಸುಮಧುರ
ಲೋಕವ
ಹೊಂಬೆಳಕಿನ ತುಸು ಮುಂಜಾವಿನ
ಇಬ್ಬನಿಯ ನೋಡಿ
ಸಂಭ್ರಮಿಸಿತ್ತು ಈ
 ನನ್ನ ಕಂಗಳು
ಹಸಿರ ಚಿಗುರಿನಲ್ಲಿ
 ಕನಸು  ಮೂಡಿ
ತುಟಿಯಂಚಿನಲಿ ಸಣ್ಣ ನಗುವು..
ಮನಸು ಕನಸಿನ ಮಾತಿಗೆ
ಆ ಬೆಳ್ ಮುಂಜಾವು ಸಾಕ್ಷಿಯಾಗಿ
ಆಲೋಚಿಸಿತ್ತು ಬದುಕಿನ ಬಗೆಗೆ
ಪೃಕೃತಿಯ ರಮಣೀಯ ದೃಶ್ಯವು
ತೋರಿಸಿತ್ತು
ಸಾಗುವ ದಾರಿಯನ್ನು..








Wednesday, June 27, 2012

ಸಾಗಬೇಕು ಬಹುದೂರ...

ದಿನಗಳು ಉರುಳುತ್ತಿವೆ
ಯಾರಿಗೂ ಕಾಯದಂತೆ,
ವೇಗವಾಗಿ ಸಾಗುತಿದೆ
ಬದುಕೆಂಬ ಗಾಡಿಯು
ನನ್ನ ಪಾಲಿನ
ಕಷ್ಟ ಸುಖಗಳು, ಅನುಭವಗಳೆಲ್ಲವೂ
ಕೇವಲ ಚಿಗುರುಗಳಷ್ಟೇ,

ಸಾಗಬೇಕಿದೆ ಇನ್ನು ಬಹುದೂರ
ಕಳೆದಿರುವ ದಿನಗಳಿಗಿಂತ ಕಳೆಯಲಿರುವ
ದಿನಗಳೇ ಹೆಚ್ಚಾದಾಗ
ಬೇಕಲ್ಲವೇ ಬದುಕಿನುದ್ದಕ್ಕೂ
ಸಾಧನೆಯ ಹೆಜ್ಜೆಗಳು
ಕಂಡ ಸಿಹಿ ಸ್ವಪ್ನಗಳಲಿ
ನನಸೆಂಬ ನಂಟಿಗೆ
ಬೇಕಾಗಿದೆ ಚಿಂತನೆಯ ಬದುಕು
ಮೌಢ್ಯತೆಗಳೆಲ್ಲ ಮೋಡದಲಿ
ಮುಸುಕಿ ಹೋಗಬೇಕಾಗಿದೆ
ಗುರಿಯೆಡೆಗೆ ಮುಖ ಮಾಡಿ
ಬದುಕಿನ ಕನಸುಗಳಿಗೆ
ಭಾವನೆ ತುಂಬಿ
ಆಗಬೇಕಿದೆ ಬದುಕೆಂಬುದು
ನನ್ನ ಪಾಲಿಗೊಂದು ಭಾವಗೀತೆ

                                                                                                                                                                                     

Sunday, June 24, 2012

ಮನವೇ ನಿನ್ನ

ನೋಟದಲಿ ನೋಡುತಿರೆ
ಹೃದಯದಲಿ ಇಂದು
ಭಾವಲೋಕದ ಸೃಷ್ಟಿಯ ಲಹರಿ
ಅರಳಿತು ಭಾವನೆ ಅರಿವಿಲ್ಲದೆ
ಬಯಸುವ ಏಕಾಂತಕೆ
ಸಂಗೀತದ  ಮಳೆಯ ಹನಿ
ಎಲ್ಲವೂ ಶೂನ್ಯವಾಯಿತು
ಮನವೇ ನಿನ್ನ ಮಾತೊಂದೇ
ನನ್ನ ಬದುಕಾಯಿತು
ಸುಳಿವಿಲ್ಲದೆ ಹೊರಟ ಮಾತೆಲ್ಲವೂ
ಮರಳಿ ಜೊತೆಯಾಯಿತು
ಚಿತ್ತಾರ ಲೋಕವೆಲ್ಲ ಗಂಭೀರದೆಡೆಗೆ
ಮುಖಮಾಡಿತು
ಬದುಕು ಹೆಣೆಯುವ ಕೆಲಸ
ಮಾಡೆಂದು ನನ್ನ ಮನವಿಂದು ಹೇಳಿತು









Wednesday, June 13, 2012

ನನ್ನ ಪ್ರೀತಿಯ ಛತ್ರಿ/ಕೊಡೆ

ಯಾಕೋ ನನ್ನ ಛತ್ರಿ ದಿನದಿಂದ ದಿನಕ್ಕೆ ಕಡ್ಡಿಯನ್ನು ಮುರಿದುಕೊಳ್ಳುತೊಡಗಿತ್ತು .
ಅದು ನನ್ನ ಪ್ರೀತಿಯ ಛತ್ರಿಯಾಗಿತ್ತು.ಮೂರು ವರುಷಗಳ ಹಿಂದೆ ಅಪ್ಪನ ಜೊತೆಗೆ
ಪೇಟೆಗೆ ಹೋದಾಗ ಬಿಳಿಯ ಬಣ್ಣದ ಪರದೆಯ ಮೇಲೆ ಕೆಂಪು ಪಾತರಗಿತ್ತಿ ಇದ್ದ ಚಿತ್ರ ನೋಡಿದೆ
.ಅದನ್ನು ಬಿಡಿಸಿದಾಗ ಪಾತರಗಿತ್ತಿ ಹಾರಿದಂತೆ ಭಾಸವಾಗುತ್ತಿತ್ತು.ಆ ಛತ್ರಿಗೂ ನನಗೂ ಯಾವ ಜನುಮದ
ಅನುಬಂಧವಿತ್ತೋ ಏನೋ..ಆ ಛತ್ರಿಯೇ ಬೇಕೆನಿಸಿ ಅದು ಚೆನ್ನಾಗಿಲ್ಲವೆಂದು ಅಪ್ಪ ಹೇಳಿದರೂ ಹಠ ಮಾಡಿ ತೆಗೆದುಕೊಂಡಿದ್ದೆ.ನಾನು ಎಲ್ಲೇ ಹೋದರೂ ಆ ಛತ್ರಿ ನನ್ನ ಜೊತೆಗೇ ಇರುತ್ತಿತ್ತು.ಮನೆಯವರಿಗ್ಯಾರಿಗೂ
ಆ ಛತ್ರಿಯನ್ನು ಒಯ್ಯಲು ಬಿಡುತ್ತಿರಲಿಲ್ಲ.ಅವರೇನಾದರೂ ಅದನ್ನು ಮುರಿದುಕೊಂಡು ಬಂದರೆ,
ಅಥವಾ ಕಾಣೆ ಮಾಡಿಕೊಂಡು ಬಂದರೆ ಎನ್ನುವ ಮಟ್ಟಿಗೆ ಆ ಛತ್ರಿಯ ಬಗೆಗಿನ ಪ್ರೀತಿ ನನ್ನದಾಗಿತ್ತು.
ನನ್ನ ಗೆಳತಿಯಾಗಿಬಿಟ್ಟಿತ್ತು ಅದು.ಮಳೆಗಾಲದ ನನ್ನ ಕನಸುಗಳು, ಭಾವನೆಗಳು ಆ ಛತ್ರಿಗೂ ಗೊತ್ತಿತ್ತು.ಆ ಛತ್ರಿಗೆ ದಕ್ಕೆಯಾಗದಿರಲೆಂದು ಅದೆಷ್ಟು ಬಿರುಗಾಳಿಯಲ್ಲಿ ನಾನೇ ತೋಯ್ದುಕೊಂಡು ಹೋಗಿದ್ದೇನೆ. ನನ್ನ ಗೆಳತಿಯರೆಲ್ಲಾ ಮಳೆಯಲ್ಲಿ ತೊಯ್ಯದಂತೆ ರಕ್ಷಿಸಿದ ನನ್ನ ಛತ್ರಿಯು ಇಂದೇಕೋ ಹಾಳಾಗುತ್ತಿದೆ.
ಛತ್ರಿ ರಿಪೇರಿ ಮಾಡುವವನ ಹತ್ತಿರ ಹೋಗಿ ರಿಪೇರಿ ಮಾಡು ಎಂದರೆ ಎಷ್ಟು ಸಿಂಪಲ್ಲಾಗಿ ಹೇಳ್ಬಿಡ್ತಾನೆ.
.ಬೇರೆ ಛತ್ರಿ ತೊಗೊಳ್ರಿ ಎಂದು...ದೂರದ ಊರಲ್ಲಿ ಮನೆಯವರು ನೆನಪಾದಾಗ ಜಾರುತ್ತಿದ್ದ ಕಣ್ಣೀರಿಗೆ
 ಛತ್ರಿ ಅಂಚಿನಲ್ಲಿ ಹರಿಯುವ ಮಳೆಯ ಹನಿಯು  ಸಾಥ್ ನೀಡುತ್ತ ನನಗೆ ಸಮಾಧಾನಿಸುತ್ತಿತ್ತು..ಆ ಛತ್ರಿ
ಇದ್ದುದ್ದರಿಂದ ಮಳೆಗಾಲವೆಂದೂ ಬೋರ್ ಅನಿಸಲೇ ಇಲ್ಲ..ಈ ಛತ್ರಿಯ ಕಡ್ಡಿಗಳು ಮುರಿದು ಹೋಗಿವೆಯಾದರೂ,
ಹೊಸ ಛತ್ರಿ ತೆಗೆದುಕೊಂಡರೂ ಈ ಛತ್ರಿಯನ್ನೇಕೋ ಕೈ ಬಿಡಲು ಏಕೋ ಮನಸ್ಸಾಗುತ್ತಿಲ್ಲ...ಎಷ್ಟೆಂದರೂ ನನ್ನ ಭಾವನೆಗಳು ಸೇರಿಲ್ಲವೇ ಆ ನನ್ನ ಪ್ರೀತಿ ಛತ್ರಿಯಲ್ಲಿ...

ಅರ್ಥವಾಯಿತೇ....

ಕಣ್ಣೀರೇ ಜೊತೆಯಾಯಿತೇ
ಆ ಒಬ್ಬಂಟಿ ಜೀವಕೆ
ಬಣ್ಣ ಬಣ್ಣದ ಕನಸುಗಳಿಗೀಗ
ಕಪ್ಪು ಬಣ್ಣವೊಂದೇ ಕಾಣುತಿದೆ
ನೋವು ಮುಸುಕಿದ ಛಾಯೆಗೆ 
ಎಲ್ಲವೂ ಬರಿದಾಗಿದೆ
ಆ ಮುಗ್ಧ  ಹೃದಯದ ಮುಗ್ಧ ಪ್ರಶ್ನೆಗಳೆಲ್ಲವೂ
ಉತ್ತರ ಸಿಗದೇ ತಡಕಾಡಿದೆ
ತವಕದಿಂದ ಮಾತನಾಡಬೇಕೆಂಬ ಹಂಬಲಕ್ಕೆ
ಪರಿಹಾರವೆಂದಿಲ್ಲ
ಪ್ರೀತಿ ಕಡಿಮೆಯಾಯಿತೆಂಬ ಉತ್ತರಕ್ಕೆ
ತಿಳಿಯಬಹುದು ಆ ಒಲವು ಕಳೆದು ಹೋದ ಮೇಲೆ
ಅರ್ಥವಾಗಬಹುದೇ ಪ್ರೀತಿ ಎಂದಾದರೂ....




Wednesday, May 02, 2012

ನೀ ನನ್ನ ಜಗತ್ತು

ನನ್ನ ಕಣ್ಣಲ್ಲಿ ನಿನ್ನ ಬಿಂಬವು
ನಿನ್ನ ಕಣ್ಣಲ್ಲಿ ನನ್ನ ಬಿಂಬವು
ಸೇರಿ ಸೃಷ್ಟಿಸಿದೆ
ಪ್ರೀತಿಯ ಜಗತ್ತನ್ನೊಂದು
ಹೃದಯ ಬಡಿತವು ಹೇಳುತ್ತಿದೆ ನಿನ್ನ ಹೆಸರ
ಹೆಸರಿಲ್ಲದ ಪ್ರೀತಿ ನೀನೆಂದು
ಮನವು ಮಾತನಾಡುತ್ತಿದೆ ಕಿವಿಗೆ ಕೇಳಿಸದಂತೆ
ನಿನ್ನ ಮನವೊಂದೇ  ಕೇಳುವಂತೆ
ನೀನಿದ್ದ  ನನ್ನ ಜಗತ್ತೇ ಸುಂದರವೆಂದು,
ಆಕಾಶದಂತೆ ತಿಳಿಯಾಗಿಸಿದೆ
ಪರಿಶುದ್ದ  ಪ್ರೀತಿಯ
 ನೀನೇ ನನ್ನ  ಜೀವನವೆಂದು
ಹೇಳಬಯಸುತ್ತದೆ ನನ್ನ ಮನವೆಂದೂ
ನೀ ನನ್ನ ಜೊತೆಗಿದ್ದರೆ ಬೇರೇ ಏನೂ ಬೇಡವೆಂದು....