Sunday, January 31, 2016

ಮೊದಲ ಸಂಬಳವೆಂದರೆ...

..  ಜೀವನದ ಸಣ್ಣ ಪುಟ್ಟ ಘಟನೆಗಳು ಕಾಡುತ್ತೆ.. ಕಾಲೇಜು ದಿನಗಳಲ್ಲಿ ಬೇಗ ಓದು ಮುಗೀಲಿ, ಕೆಲಸಕ್ಕೆ ಬೇಗ ಸೇರಬೇಕು ಎಂದು ಅನಿಸುತ್ತಿದ್ದುದು ಸುಳ್ಳಲ್ಲ..ಫೇರ್ ವೆಲ್ ದಿನ ಅಯ್ಯೋ ಮುಗೀದೇ ಹೋಯ್ತಾ ಎಂದೆನಿಸಿದ್ದೂ ನಿಜ..  ಕಾಲೇಜು ಜೀವನಕ್ಕೆ ವಿದಾಯ ಹೇಳಿ ಕೆಲವು ತಿಂಗಳುಗಳು ಕಳೆದಿದೆ. ಆರು ತಿಂಗಳ ಹಿಂದಷ್ಟೇ ಓದು ಮುಗಿಸಿ ಬೆಂಗಳೂರೆಂಬ ಮಹಾನಗರಿಗೆ ಬರುವಾಗ ಭಯ, ಆತಂಕ, ಅದೆಲ್ಲೋ ಚೂರು ಖುಷಿ..
 ಅಂಕದ ಪಟ್ಟಿ ಕೈಗೆ ಬರುವ ಮೊದಲೇ ಕೆಲಸ ಸಿಕ್ಕಿದಾಗ ಮೊದಲ ಸಂಬಳಕ್ಕಾಗಿ ಕಾದ ಪರಿಯಂತೂ ಹೇಳತೀರದು..  ಜೀವನದ ಮೊದಲ ಸಂಬಳವನ್ನು ಹೆತ್ತವರ ಕೈಗಿತ್ತು  ಅವರ ಕಣ್ಣಿಂದ ಜಾರುವ ಪ್ರೀತಿಯನ್ನು  ಎದೆಗಪ್ಪಿಕೊಳ್ಳಬೇಕೆಂಬ ಬಹುದಿನದ ಕನಸು ನನಸಾಗಿತ್ತು.. .
ಮೊದಲ ಸಂಬಳ ಬಂದ ಕೂಡಲೇ ಊರಿಗೆ ಹೊರಟಿದ್ದೆ.. ಅದನ್ನು ಎಷ್ಟೊತ್ತಿಗೆ ಮನೆಯವರ ಕೈಲಿ ಇಡುತ್ತೀನೋ ಎಂಬ ಧಾವಂತ. ಬಸ್ಸಿನಲ್ಲಿ ರಾತ್ರಿಯೆಲ್ಲಾ ನಿದ್ದೆಯೇ ಬಂದಿರಲಿಲ್ಲ.. ಬೆಳಿಗ್ಗೆ ಮನೆ ತಲುಪಿದ ಕೂಡಲೇ ಹೇಳಿದ್ದೆ.. ." ಅಪ್ಪ ಅಮ್ಮ...    ಇದು ನನ್ನ ಮೊದಲ ಸಂಬಳ. ನೀವು ನನಗೆ ಮಾಡಿದ್ದಕ್ಕೆ ನಾ ಕೊಡುತ್ತಿರುವುದು ಏನೂ ಅಲ್ಲ.. ಇದು ಒಂದು ಚಿಕ್ಕ ಖುಷಿ ಅಷ್ಟೇ"  ಎಂದು ಅವರ ಕೈಗೆ ಮೊದಲ ಸಂಬಳವನ್ನು ಇರಿಸುವಾಗ ಒಂದು ರೂಪಾಯಿಯನ್ನೂ ಮುಟ್ಟದೇ ಖುಷಿಯಿಂದಲೇ ತಿರಸ್ಕರಿಸಿ  ಮಗಳೇ.. ಇದನ್ನೆಲ್ಲಾ ನಾವು ಎಂದಿಗೂ ಬಯಸಿಲ್ಲ, ಬಯಸೋದೂ ಇಲ್ಲ ನಾ ಮಾಡಿದ್ದು ನನ್ನ ಕರ್ತವ್ಯ ಅಷ್ಟೇ..  ಎಂದಾಗ ಆ ಕ್ಷಣಕ್ಕೆ ಮೂಕಿಯಾಗಿಬಿಟ್ಟಿದ್ದೆ..

ಅಪ್ಪನ ದುಡ್ಡನ್ನು ಧಾರಾಳವಾಗಿಯೇ ಖರ್ಚು ಮಾಡುತ್ತಿದ್ದ ನನಗೆ ,  ನನ್ನ ಸಂಬಳ ಬಂದಾಗಲೇ ಅದರ ಬೆಲೆ ಗೊತ್ತಾಗಿದ್ದು. ಅದರ  ಖುಷಿಗೆ ಎಲ್ಲೆಯಿರಲಿಲ್ಲ.. ಅದೊಂಥರಾ ಭಾವ.. ಕಪಾಟಿನ ತುಂಬೆಲ್ಲಾ ಸೀರೆ ಇದ್ದರೂ ನನ್ನ ಸಂಬಳದಲ್ಲಿ ಅಮ್ಮನಿಗೆ ಕೊಡಿಸಿದ  ಸೀರೆಯ ನೆರಿಗೆಗಳೇ ಅಮ್ಮನ ಮುಖದ  ಖುಷಿಯನ್ನು ಹೇಳುವಂತಿತ್ತು..

ಎಲ್ಲರ ಜೀವನದಲ್ಲಿಯೂ ಇದು ಸಾಮಾನ್ಯವೇ ಆಗಿರಬಹುದು.. ಅಥವಾ ಕೆಲವರಿಗೆ ಅದರಲ್ಲೇನು ವಿಶೇಷತೆ ಇದೆ ಎಂತಲೂ ಅನ್ನಿಸಿರಬಹುದು.. ಆದರೆ ಜೀವನದ ಚಿಕ್ಕ ಪುಟ್ಟ ಸಂಗತಿಗಳಲ್ಲಿ ಖುಷಿ ಪಡುವ ನನ್ನಂಥವರಿಗೆ ಆ ದಿನ ದೊಡ್ಡದಾಗಿತ್ತು.. ಕಾಲೇಜಿನ ದಿನಗಳಲ್ಲಿ ನಿಂಗೆ ಕೆಲಸ ಸಿಕ್ಕಿದ್ಮೇಲೆ ನಿನ್ ಫಸ್ಟ್ ಸಾಲರೀಲಿ ಏನ್ ಮಾಡ್ತೀಯಾ ಎಂದು ದೂರದ ಕನಸನ್ನು ಹಂಚಿಕೊಳ್ಳುತ್ತಿದ್ದ  ಕ್ಷಣಗಳೆಲ್ಲಾ ನೆನಪಾಗಿತ್ತು.. ಅದೇನ್ ಮಹಾ ಸಾಧನೆ ಅಲ್ಲ ಎನ್ನುವುದು ಗೊತ್ತಿದ್ದರೂ, ಎಂದೋ ಕಂಡಿದ್ದ ಸಣ್ಣ ಕನಸಿನ ಸಾಕಾರವಾಗಿತ್ತು.. ಮೊದಲು ಎಂಬುವುದಕ್ಕೆ ಎಷ್ಟು ಮಹತ್ವ ಎಂಬ ಅರಿವಾಗಿದ್ದು ಎರಡನೇಯ ಸಂಬಳ ಬಂದಾಗ..
      ಮೊದಲ ಸಂಬಳ ಬಂದು 6 ತಿಂಗಳೇ ಕಳೆದರೂ,  ಆ ಮೊದಲ ಸಂಬಳ ಬಂದ ದಿನವಿನ್ನೂ ಕಣ್ಣಿನಲ್ಲಿಯೇ ಕಟ್ಟಿಟ್ಟಂತೆ ಇದೆ..


Friday, April 17, 2015

ಶುಂಟಿ ಪೆಪ್ಪರ್ ಮೆಂಟನ್ನು ನೆನೆಯುತ್ತಾ...

(ಈ ಬರಹ ನಾ ಬರೆದಿರೋದಲ್ಲ.. ಬರೆದಿರೋ ವ್ಯಕ್ತಿ ಅನಾಮಿಕನೆಂದು ಹೇಳುವುದಕ್ಕಿಂತ, ಅವರ ಹೆಸರನ್ನು 'ಅಪ್ಪಿಗುಬ್ಬಿ' ಎಂದೇ ಇಟ್ಟಿದ್ದಾಗಿದೆ...ನಾನು ಮೊದಲು ಈ  ಬರಹವನ್ನು ಓದಿದಾಗ ನನ್ನದೇ ಭಾವಗಳೆನಿಸುವಷ್ಟು  ಖುಷಿ ಕೊಟ್ಟಿತು..ಯಾವುದೋ ಹಾಳೆಯಲ್ಲಿ ಹುಟ್ಟಿ ಅಲ್ಲಗೇ ಕೊನೆಯಾಗುವುದಕ್ಕಿಂತ ಎಲ್ಲರ ಜೊತೆಗೆ ಹಂಚಿಕೊಳ್ಳಬೇಕೆಂದೆನಿಸಿತು.. ಹಂಚಿಕೊಂಡೆ.)..ಜಗತ್ತು ತುಂಬಾನೇ ಬದಲಾಗಿಬಿಟ್ಟಿದೆ..ಅದೆಷ್ಟು ದುಬಾರಿ ಆಗಿಬಿಟ್ಟಿದೆ ಕಣ್ರಿ..ನಾ ಚಿಕ್ಕೋನಿದ್ದಾಗ ಎರಡೂವರೆ ರೂಪಾಯಿಗೆ, ನನ್ನ ಹಚ್ಚ ಹಸಿರಿನ ,ಗಿಡಮರಗಳಿಂದ ತುಂಬಿದ್ದ, ಕಾಡುಗಳಿದ್ದ, ನಾಲ್ಕೇ ನಾಲ್ಕು ಮನೆಗಳಿದ್ದ ಪುಟ್ಟ ಹಳ್ಳಿಯಿಂದ, ಹನ್ನೆರಡು ಕಿ.ಲೋ ಮೀಟರ್ ದೂರದಲ್ಲಿರೋ ಹತ್ತು ಹದಿನೈದು ಅಂಗಡಿಗಳ ಸಾಲಿದ್ದ, ಪಟ್ಟಣ ಎಂದು ಕರೆಯಿಸಿಕೊಳ್ಳುವ ಪುಟ್ಟ ಪೇಟೆಗೆ ಬಂದು ತಲುಪುತ್ತಿದ್ದೆ..ಆದರೆ ಈಗ ಅದೇ ಸ್ಥಳಕ್ಕೆ ಅದೇ ಆರು ಚಕ್ರದ ಗವರ್ಮೆಂಟ್ ಬಸ್ ಗೆ  ಹದಿನೈದು ರೂಪಾಯಿ ಆಗಿಬಿಟ್ಟಿದೆ..
ಯಾವುದೋ ಹಳೆಯ ಡಬ್ಬಿಗಳಲ್ಲಿ ಕೂಡಿಟ್ಟ ಒಂದೆರಡು ರೂಪಾಯಿಯನ್ನು , ಸಾವಿರ ರೂಪಾಯಿಯ ಖುಷಿಯಂತೆ ಗಟ್ಟಿಯಾಗಿ ಹಿಡಿದು, ಕಿಸೆಯಿಂದ ಬಿದ್ದುಗಿದ್ದು ಏನಾದ್ರೂ ಹೋದ್ರೆ ಅನ್ನೋ ಹೆದರಿಕೆಯಲ್ಲಿ ಆಗಾಗ ಚೆಕ್ ಮಾಡಿಕೊಳ್ಳುತ್ತಾ, ಅದೇ ದುಡ್ಡನ್ನು ನೋಡಿ ಖುಷಿ ಪಡುತ್ತಾ ಸಾಗುತ್ತಿದ್ದರೆ, ಪೇಟೆಯ ಹನ್ನೆರಡು ಕಿ.ಲೋ ಮೀಟರ್ ದೂರವು, ಕ್ಷಣಮಾರ್ಧದಲ್ಲಿಯೇ ಬಂದು ಹೋಗುತ್ತಿತ್ತು..
ಆದರೆ ಇವತ್ತು ನನ್ನ ಅಕ್ಕನ ಪುಟ್ಟ ಮಗಳಿಗೂ ಬ್ರ್ಯಾಂಡೆಡ್  'ಡೇರಿ ಮಿಲ್ಕ್ ಸಿಲ್ಕ್' ಚಾಕೋಲೇಟೇ ಬೇಕಂತೆ..ಎಲ್ಲಾ ದುಬಾರಿಯ ಚಾಕಲೇಟಿನ ಹೆಸರನ್ನೂ ಎಷ್ಟೊಂದು ಚೆನ್ನಾಗಿ ಬಾಯಿಪಾಠ ಮಾಡಿಕೊಂಡಿದ್ದಾಳೆ.ನನ್ನ ಬಾಲ್ಯದಲ್ಲಿದ್ದ ಲಿಂಬೂ ಪೆಪ್ಪರ್ಮೆಂಟು , ಶುಂಟಿ ಪೆಪ್ಪರ್ಮೆಂಟು 2 ರೂಪಾಯಿಗೆ ಬೊಗಸೆ ತುಂಬಾ ಬರ್ತಿತ್ತಲ್ಲ.! ಈಗ ಅದಕ್ಕೂ ಮುಪ್ಪು ಬಂದು, ತನ್ನ ಗತ ವೈಭವ ನೆನೀತಾ, ಯಾವುದೋ ಮೂಲೆಯಲ್ಲಿ ಕೂತುಬಿಟ್ಟಿದೆ ಪಾಪ.
''ಚೀಲ ತುಂಬಾ ರೊಕ್ಕ ತೊಕ್ಕೊಂಡ್ ಹೋದ್ರೂ, ತರಕಾರಿ-ಸಾಮಾನು ಕಿಸೇನಾಗ್ ಹಾಕ್ಕೋಬರೋ ಹಂಗ್ ಆಗ್ಬಿಟ್ಟದ ಬಿಡಪ್ಪಾ" ಅಂತ ಬಯಲು ಸೀಮೆ ತಾತ ಲೊಚಗುಟ್ಟಿದ್ರಲ್ಲೂ ಅರ್ಥವಿದೆಯೆಂದೆನಿಸ್ತು.

 ಆದರೆ,
ಜಗತ್ತಿನಲ್ಲಿ ಅಂದೂ ಒಂದು ಬೊಗಸೆ ಪ್ರೀತಿ, ಪಾವು ತಟ್ಟೆ ಕಾಳಜಿಯನ್ನು ಸುತ್ತಮುತ್ತಲಿನ ಜನಕ್ಕೆ ತೋರಿಸಿದ್ರೆ,ಅದಕ್ಕಿಂತಲೂ ಹೆಚ್ಚು ಪ್ರೀತಿ ವಿಶ್ವಾಸ ಮರಳಿ ಸಿಗ್ತಾ ಇತ್ತು..ಅದು ಇಂದಿಗೂ ಬದಲಾಗಿಲ್ಲ..ಸ್ನೇಹ, ಪ್ರೀತಿ, ವಿಶ್ವಾಸ ಎಂದಿಗೂ ಬದಲಾಗಲಾರದು..ಥ್ಯಾಂಕ್ ಗಾಡ್..
ಹಂಗೇನೇ ನಾವು ಕಾಣೋ ಕನಸುಗಳಿಗೆ, ಕಾಣಬಯಸುವ ನಾಳೆಗೆ, ಭರವಸೆಯ ಯೋಚನೆಗಳಿಗೆ, ಆಸೆಗಳಿಗೆ ಬೆಲೆ ತೆರಬೇಕಾಗಿಯೇ ಇಲ್ಲ ನೋಡಿ!! ಇಂತಹ ಕಾಸ್ಟ್ಲೀ ದುನಿಯಾದಲ್ಲಿಯೂ ಅವು ಫ್ರೀ..
ಬದಲಾವಣೆ ಅನಿವಾರ್ಯವೇ.. ಆದರೆ ಒಂದಿಷ್ಟು ಉದ್ಧಾರ ಆಗೋ ಮನಸ್ಸು, ಅದಕ್ಕೆ ಪೂರಕ ವಾತಾವರಣ (ಎಲ್ಲರಿಗೂ ಸಿಗೋದಿಲ್ಲ,ಒಪ್ಕೋತ್ತೀನಿ) ಪರಿಶ್ರಮ, ಒಂದು ಗೋಣೀ ಚೀಲದಷ್ಟು ನಾಳೆಯ ಕನಸು,ಗೆದ್ದಾಗ ಖುಷಿ ಪಡೋ ಜೀವಗಳು, ಸೋತಾಗ ಕೈ ಹಿಡಿದು ನಡೆಸೋ ಭಾವಗಳಿದ್ದರೆ, ಜಗತ್ತು ಎಷ್ಟೇ ಬದಲಾದರೂ, ಎಷ್ಟೇ ದುಬಾರಿಯಾದರೂ ನಾವು ಅದಕ್ಕಿಂತ ಒಂದು ಕೈ ಮೇಲೆ ಹೋಗಿ ಖುಷಿಯಾಗಿರಬಹುದೇನೋ ಅಲ್ವಾ?..


ಬರಹ: ಅಪ್ಪಿಗುಬ್ಬಿ

Sunday, April 27, 2014

ದೇವರು ಭೂಮಿಗೆ ಕಳಿಸಿಬಿಟ್ಟ...

ಇನ್ನೂ ನಾನಾಗ ಭೂಮಿಗೆ ಬಂದಿರಲೇ ಇಲ್ಲ. ದೇವರ ಬಳಿಯಲ್ಲೇ ಖುಷಿಯಾಗಿದ್ದೆ. ಭೂಮಿಯ ಮೇಲಿನ ಯಾವ ಬಂಧಗಳೂ, ಸಂಬಂಧಗಳೂ ನನಗಿರಲಿಲ್ಲ. ಇದ್ದಕ್ಕಿದ್ದಂತೆ ಒಂದು ದಿನ ದೇವರು ನನ್ನ ಬಳಿಗೆ ನೀನು ಭೂಮಿಗೆ ಹೋಗು , ಹೊಸ ರೂಪ ಕೊಟ್ಟು ನಿನ್ನನ್ನು ಸೃಷ್ಟಿಸುತ್ತೇನೆ ಎಂದ. ಊಹೂಂ ಜೋರಾಗಿ ಅಳುವುದೊಂದೇ ನನ್ನ ಕೆಲಸ ಆಗ. ಇಲ್ಲ ಸ್ವರ್ಗವನ್ನು ಬಿಟ್ಟು ನಾನು ಹೋಗಲಾರೆ ಎಂದು. ದೇವರು ನಗುತ್ತ ನಗುತ್ತ ಪುಟ್ಟಿ...ನೀನು ಹೋಗಲೇಬೇಕು ಎಂದ. ದೇವರೇ ನಿನ್ನನ್ನು ಬಿಟ್ಟು ನಾನು ಭೂಮಿಗೆ ಹೋದರೆ ಅಲ್ಲಿ ನನ್ನನ್ಯಾರು ನೋಡ್ಕೋಳ್ತಾರೆ ? ಎಂಬ ನನ್ನ ಪ್ರಶ್ನೆಗೆ, ಸಂಬಂಧವೆಂಬ ಬಂಧನದಲ್ಲಿ ನೀನು ಸೇರಿ ಹೋಗ್ತೀಯಾ.ನಿನಗೆ ಅಲ್ಲಿರಲು ಇಷ್ಟವಾಗದಿದ್ದರೆ ನಾ ನಿನ್ನನ್ನು ಮತ್ತೆ ವಾಪಸ್ ಕರೆದುಕೊಳ್ಳುತ್ತೇನೆ ಎಂದ.

ಇಷ್ಟವಿಲ್ಲದ ಭೂಮಿಗೆ ನಾನೊಬ್ಬಳೇ ಬಂದೆ. ಎಲ್ಲರೂ ಅಪರಿಚಿತರೆಂಬ ಭಾವನೆಯಲ್ಲಿ. ಇಷ್ಟು ದಿನ ದೇವರೇ ನನ್ನನ್ನು ನೋಡ್ಕೊಳ್ತಿದ್ದರು.. ಇನ್ಮುಂದೆ ಯಾರು ನೋಡಿಕೊಳ್ಳುತ್ತಾರೆ ಎಂದು ಯೋಚಿಸುತ್ತಿದ್ದೆ. ನಾ ಹುಟ್ಟಿದಾಗ ಎಲ್ಲರೂ ಸಂಭ್ರಮಿಸಿದರು. ಮನೆಯ ಮುದ್ದಿನ ಮಗಳಿವಳು ಎಂಬ ಖುಷಿಯ ಭಾವದಲ್ಲಿ.. ಬೆಳೆಯುತ್ತ ಬೆಳೆಯುತ್ತ ಪ್ರೀತಿಯ ವೃತ್ತದಲ್ಲಿ ಸೇರಿ ಹೋದೆ. ಊಹಿಸಿರದಕ್ಕಿಂತಲೂ ಬದುಕು ಸ್ಪುಟವಾಗಿ ಕಾಣಿಸುತ್ತಿತ್ತು. ಅಪ್ಪನ ಬುದ್ದಿ ಮಾತುಗಳೆಲ್ಲಾ ಹೊಸತನ ಹೊಸರೂಪ ಕೊಟ್ಟಿತು.. ತನ್ನನ್ನು ತಾನು ಪ್ರೀತಿಸುವುದಕ್ಕಿಂತಲೂ ಹೆಚ್ಚು ನನ್ನನ್ನೇ ಪ್ರೀತಿಸುವ ಅಮ್ಮನೆಂಬ ಪ್ರೀತಿಯ ಹೂವನ್ನು ಮುಡಿಗೇರಿಸಿಕೊಂಡೆ. ಎಂದಿಗೂ ಬಾಡದ ಹೂವೆಂದು ತಿಳಿದು..ಸಂಬಂಧಗಳೇ ಬದುಕೆಂಬ ಪಾಠವನ್ನು ಮತ್ತೆ ಮತ್ತೆ ಮನನ ಮಾಡಿಕೊಳ್ಳುತ್ತ ಇಲ್ಲಿಯವರೆಗೆ ಬಂದಿದ್ದೇನೆ.

ಇಂದಿಗೂ ದೇವರಿಗೆ ಥ್ಯಾಂಕ್ಸ್ ಹೇಳುತ್ತ ಬಂದಿದ್ದೇನೆ..ನನ್ನನ್ನು ಭೂಮಿಗೆ ಕಳುಹಿಸಿದ್ದಕ್ಕೆ. ಸ್ವರ್ಗಕ್ಕಿಂತಲೂ ಹೆಚ್ಚು ಖುಷಿಯನ್ನು ಮನೆಯಲ್ಲಿಯೇ ಕರುಣಿಸಿದ್ದಕ್ಕೆ. ದೇವರಿಗಿಂತಲೂ ಹೆಚ್ಚೆಂಬ ಅಮ್ಮನನ್ನು ಬದುಕಾಗಿಸಿದ್ದಕ್ಕೆ..ಪ್ರೀತಿ ಎಂಬ ಪದಕ್ಕೆ ಹಲವಾರು ಅರ್ಥವನ್ನು ತೋರಿಸಿದ್ದಕ್ಕೆ..ಸ್ವರ್ಗವೆಂಬ ಪದಕ್ಕೆ ಅರ್ಥ ಸಿಕ್ಕಿದ್ದು ಭೂಮಿಯಲ್ಲಿಯೇ.. ಇನ್ಯಾವತ್ತಾದರೂ ದೇವರು ನನ್ನ ಬಳಿ ಬಂದು ಸ್ವರ್ಗಕ್ಕೆ ಹೋಗೋಣವೆಂದರೆ ನಾನಂತೂ ಹೋಗಲಾರೆ. ದೇವರೇ ಈ ಬದುಕಿನಲ್ಲಿ ನನ್ನನ್ನು ಶಾಶ್ವತವಾಗಿ ಇರಿಸಿಬಿಡುವೆಯಾ? ಎಂದರೆ ಅವನಲ್ಲಿ ಉತ್ತರವೇ ಇಲ್ಲ. ದೇವರಿಗಿಂತಲೂ ಹತ್ತಿರವಾಗಿಬಿಟ್ಟಳು ಅಮ್ಮ. ನಗುವುದೊಂದನ್ನು ಮಾತ್ರ ಕಲಿಸಿಕೊಟ್ಟಳು. ದೇವರು ನನ್ನನ್ನು ಭೂಮಿಗೆ ಕಳುಹಿಸಿದ್ದೇನೋ ನಿಜ. ಆದರೆ ಅಮ್ಮ ಮಾತ್ರ ಎಂದಿಗೂ ನನ್ನನ್ನು ಹಿಂತಿರುಗಿ ದೇವರ ಬಳಿ ಕಳುಹಿಸಲು ಇಷ್ಟಪಡಲಾರಳು ಎಂಬುದು ನೂರಕ್ಕೆ ಸಾವಿರದಷ್ಟು ನಿಜ. .ಪ್ರತೀ ದಿನಗಳನ್ನು ಕಳೆಯುವಾಗ ಅನಿಸುವುದೆಂದರೆ ಮತ್ತಿನ್ನೆಂದೂ ದೇವರ ಬಳಿ ಹೋಗಬಾರದೆಂದು... ದೇವರಿಗಿಂತ ಭೂಮಿಯ ಬಂಧಗಳೇ ಹೆಚ್ಚು ಹತ್ತಿರ..

Saturday, December 14, 2013

ಕತ್ತಲೆಂಬ ಭ್ರಮೆಯಲ್ಲಿ ಬೆಳಕಿನ ಹುಡುಕಾಟ...

ಜೀವನಾ ಹೇಗಿದೆ ಎಂಬ ಪ್ರಶ್ನೆಗೆ ಎಷ್ಟೋ ಸಲ ಬರುವ ಉತ್ತರ ಬೋರಿಂಗ್ ಎಂದು.. ಕಾರಣವೇನೆಂದು ಯಾರಿಗೂ ತಿಳಿದಿಲ್ಲ..ನಮಗೆ ನಾವೇ ಬೋರ್ ಆಗಿಬಿಟ್ಟಿದ್ದೇವಾ? ನಮ್ಮೊಳಗಿನ ಕನಸುಗಳು, ನಾಳಿನ ಭರವಸೆಗಳು, ಏನನ್ನಾದರೂ ಸಾಧಿಸಲೇಬೇಂಬ ಛಲವೆಲ್ಲ ಏನಾಯಿತು..ಅಯ್ಯೋ ಲೈಫ್ ತುಂಬಾ ಬೋರು ಎಂಬ ಮಾತಿಗಿಳಿಯುವ  ಮೊದಲು ಯಾಕೆ ಬೋರ್ ಆಗ್ತಾ ಇದೆ..ಎಲ್ಲವೂ ನಮ್ಮಿಷ್ಟದಂತೆಯೇ ನಡೆಯುತ್ತಿದೆ ಆದರೂ ಬೋರಿಂಗ್ ಎಂದರೆ  ಕಾರಣ ಇದಕ್ಕೆ ನಾವೇ ಹೊರತು ಬೇರೆಯವರ್ಯಾರೂ ಪರಿಹಾರ ಕೊಡಲು ಸಾಧ್ಯವಿಲ್ಲ..ಜಗತ್ತಿನಲ್ಲಿರುವ ಜನರೆಲ್ಲ ಸಲಹೆಗಳನ್ನು ಕೊಡಬಲ್ಲರು ಆದರೆ ನಮ್ಮ ಮನಸ್ಸಿಗೆ ಅರ್ಥಮಾಡಿಸಿಕೊಳ್ಳುವವರು ನಾವೊಬ್ಬರೇ.. ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಾವೇ ಆಗಿರುತ್ತೇವೆ..

ಅವರೇ ಆಯ್ದುಕೊಂಡ ಅವರಿಷ್ಟದ ಸಬ್ಜೆಕ್ಟ್ , ಇಂತಹ ವೃತ್ತಿಗೇ ಹೋಗಬೇಕೆಂದು ಅವರಿಷ್ಟದ ಕೆಲಸವನ್ನೇ ಆಯ್ದುಕೊಂಡಿರುತ್ತಾರೆ..ಹುಚ್ಚುಕೋಡಿ ಮನಸಿಗೆ ಕಡಿವಾಣ ಹಾಕಿಕೊಳ್ಳಬೇಕಾದ ಅವಶ್ಯಕತೆ ಇದೆಯೋ, ಅಥವಾ ಅನಿವಾರ್ಯತೆ ಇದೆಯೋ ಗೊತ್ತಿಲ್ಲ.. ಆದರೆ ಜೀವನದ ಪ್ರತೀಯೊಂದು ಕೆಲಸದಲ್ಲೂ, ಪ್ರತೀಯೊಂದು ಕ್ಷಣದಲ್ಲೂ ಖುಷಿಯಾಗಿರಬೇಕೆಂಬುದು ಎಲ್ಲರ ಹಂಬಲ..ಯಾರಾದರೂ ಪ್ರೀತಿಯಿಂದ ಮಾತನಾಡಿಸಿದಾಗ ಎಲ್ಲೋ ಒಂದು ಕಡೆ ಸಂತಸವೆಂಬ ಬೆಳಕಿನ ಕಿರಣವು ಹರಿಯುತ್ತದೆ.. 

ಪ್ರತೀ ಕತ್ತಲೂ ಸೂರ್ಯೋದಯಕ್ಕಾಗಿ ಕಾಯುತ್ತಿರುತ್ತದೆ. ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು. ಇಷ್ಟವೋ, ಕಷ್ಟವೋ, ಅನಿವಾರ್ಯವೋ ಆಯ್ದುಕೊಂಡಿರುವ ಕೆಲಸವನ್ನು ಪ್ರೀತಿಯಿಂದ ಮಾಡಲೇಬೇಕಲ್ಲವೇ? ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದಕ್ಕಿಂತ, ಕಾಲು ಚಾಚುವಷ್ಟು ಉದ್ದದ ಹಾಸಿಗೆಯನ್ನೇ ಮಾಡಿಕೊಳ್ಳುವೆ ಎಂಬುವುದು ಜಾಣತನ.

ಎಲ್ಲವೂ ಮನಸ್ಸಿಗೆ ಸಂಬಂಧಿಸಿದ್ದು.. ಪ್ರಾನ್ಸ್ ನಲ್ಲೊಬ್ಬ ಮನೋವಿಜ್ಷಾನಿ ಇಮಾಯಿಲ್ ಕುವೇ ಎಂಬುವವನು ರೋಗಿಗಳಿಗೆ ಸಕಾರಾತ್ಮಕ ಮನೋಭಾವವನ್ನು ತುಂಬಿಸಿ ಲಕ್ಷಾಂತರ ಜನರನ್ನು ಗುಣಪಡಿಸಿದ್ದನಂತೆ.. ''ನಾನು ಆರೋಗ್ಯವಾಗಿರುವೆ. ನನ್ನ ಆರೋಗ್ಯ ಸುಧಾರಿಸುತ್ತದೆ, ಎಂದು ಮನಸ್ಸಿಗೆ ಮತ್ತೆ ಮತ್ತೆ ಹೇಳಿಕೊಳ್ಳಬೇಕೆಂದು , ಪ್ರತೀದಿನ ರಾತ್ರಿ ಮಲಗುವ ಮುಂಚೆ ಅದೇ ಯೋಚನೆಯಲ್ಲಿ ಮಲಗಬೇಕು" ಎಂದು ಹೇಳುತ್ತಿದ್ದನಂತೆ..ಇಂತಹ ಸಕಾರಾತ್ಮಕ ಮನಸ್ಸಿನ ಸ್ಥಿತಿಯು ಮತ್ತಷ್ಟು ವರುಷಗಳು ಸಂತಸವನ್ನು ತಂದುಕೊಡಬಲ್ಲುದು..

ಪ್ರತೀ ಬೋರಿಂಗ್ ಎಂಬ ಹೇಳಿಕೆಯ ಸುತ್ತಲೇ ಎಂಜಾಯ್ ಎಂಬ ಪದವು ಸುತ್ತುತ್ತಿರುತ್ತೆ.. ಆದರೆ ನಮ್ಮ ಭಾವನೆಗಳು ಮಾತ್ರ ಯಾವುದೋ ಒಂದಕ್ಕೆ ಅಂಟಿಕೊಂಡು ಒದ್ದಾಡುತ್ತಿರುತ್ತದೆ..ಖುಷಿಯ ಚಿಲುಮೆಯನು, ಸಕಾರಾತ್ಮಕವಾದ ಭಾವಗಳನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳಬೇಕು..

Monday, November 25, 2013

ವಿಳಾಸವಿಲ್ಲದ ಕನಸಿನ ಪ್ರೀತಿಯ ಸಾಲುಗಳು.....

ಆವತ್ತು ಏನೋ ಬರೆಯೋಣ ಅಂತ ಹೋದ್ರೆ ಬರೆಯುತ್ತಿದ್ದುದು ಪ್ರೀತಿಯ ಬಗೆಗೆ... ದೊಡ್ಡದಾಗಿ ಪ್ರೀತಿಯ ಹಾಡುಗಳೇ  ಕಿವಿಗೆ ಬಂದು ಅಪ್ಪಳಿಸುತ್ತಿತ್ತು.. . ನಿನ್ನ ಕನಸಿನ ಹುಡುಗ ಹೇಗಿರಬೇಕು ಎಂದು ರೂಂಮೇಟ್ ಕೇಳಿದ ಪ್ರಶ್ನೆಗೆ ನಾನು ಉತ್ತರ ನೀಡಲೇಬೇಕಾ? ಎಂದು  ಯೋಚಿಸಲು ಹೊರಟಿದ್ದೆ..  ಅವನ್ಯಾರೋ  ಒಂದು ದಿನ ಜೀವನದಲ್ಲಿ ಬರುವವನ ಬಗೆಗೆ ಕಟ್ಟಿದ ಕನಸುಗಳನ್ನೆಲ್ಲ ಹೇಳತೊಡಗಿದ್ದೆ.. ಬಹುಶಃ ಆ ಕನಸುಗಳಿಗೂ ಒಂದು ಪರಿಧಿಯೆಂಬುದಿಲ್ಲ ..ಮಿತಿಯೆಂಬುದಿಲ್ಲ. ಪಿಟೀಲು ಕುಯ್ಯಲು ನನಗೆ ಹೇಳಿಕೊಡಬೇಕಿಲ್ಲ...

ಅವನೆಂದರೆ ಪ್ರಪಂಚದಲ್ಲಿ ಅವನಿಗಿಂತಲೂ ನಾನ್ಯಾರನ್ನೂ ಹೆಚ್ಚು ಪ್ರೀತಿಸಬಾರದು..ನನ್ನ ಹುಚ್ಚು ಭಾವುಕತೆಗಳ ನಡುವೆ ಅವನದ್ದೊಂದು ಭಾವ ಸೇರಿ ಆಗಬೇಕು ಭಾವಗೀತೆಯ ಬದುಕು .. ಹಟಕ್ಕೆ ಬಿದ್ದ ಮನಸಿನ ಚಿತ್ರಗಳನೊಮ್ಮೆ ಬಣ್ಣ ಹಾಕಿ ಹೃದಯದ ಫ್ರೇಮ್ ನಲ್ಲಿ ಕಟ್ಟಿಸಿಡಬೇಕು.. ಕೆಲವೊಂದು ಬೇಸರ ಅಳು ದುಃಖಗಳ ನಡುವೆಯೂ ನನಗೆ ಅವನು ಅವಗೆ ನಾನೆಂಬ ಸಂತೋಷದ ದೋಣಿಯು ತೇಲಿ ಬಂದರೆ ಸಾಕು..ಪ್ರೀತಿಯೆಂಬ ಬೆರಳಿನ ತುದಿ ತಾಕಿದಾಗಲೂ ಅದೇ ಸಂತಸವಿದ್ದರೆ ನನಗೇನು ಬೇಕು.. ದಿಟ್ಟಿಸುತ್ತ ನೋಡುವಾಗ ಚಂದ್ರನೂ ಸರಿಸಾಟಿಯಾಗಲಾರ ಬೆಳದಿಂಗಳಲ್ಲಿ.. ಹಣೆಗೆ ಹಣೆ ತಾಕುವಷ್ಟು  ಹತ್ತಿರದಿಂದ ಮಾತನಾಡಿದರೆ ಕಳೆದು ಹೋದವೇನೋ ದಿನಗಳು..ಮರೆಯಾಗದೇ ಇರುವ ಹುಚ್ಚಿನ ಕನಸುಗಳಿಗೆ ನನಸೆಂಬ ಹಣೆಪಟ್ಟಿಯನ್ನು ಕೊಟ್ಟರೆ ಅದೆಂಥ ಸುಂದರ ಬದುಕು..

ಒಂದೇ ಒಂದು ದಿನ ಇಬ್ಬರಲ್ಲಿ ಒಬ್ಬರು ಮನೆಯಲ್ಲಿಲ್ಲದಿದ್ದರೂ ಕೇಳಿಸುತ್ತಿರುವಂತೆ  ಮಾತುಗಳು .. ಅವನ ಪ್ರತೀ ಮೌನದಲ್ಲಿಯೂ ನನ್ನ ಧ್ವನಿಯನ್ನು ಹೊರಹೊಮ್ಮಿಸಬೇಕಿದೆ..ಅವನು ನನ್ನ ಬದುಕಿನ ಭಾಗವಾಗಿರದೇ ನನ್ನ ಬದುಕೆಂಬ ಪಯಣಕ್ಕೆ ಇಟ್ಟುಬಿಡುವೆ ಅವನ ಹೆಸರನ್ನು..ಕಟ್ಟಿದ ಆಸೆಗಳ ಗೋಪುರದ ತುತ್ತ ತುದಿಯವೆರಗೂ  ಜೊತೆಗೇ ಕೈ ಹಿಡಿದು ನಡೆದರೆ ಅದ್ಯಾವ ಸುಸ್ತು, ದಣಿವು ಆಗಲಾರದು..ಹೊಟ್ಟೆ ಹುಣ್ಣಾಗಿಸುವಂತೆ ನಕ್ಕಾಗ , ಅದೇ ನಗುವಿನ ಕಣಗಳೆಲ್ಲ ಅವನನ್ನೇ ನೆನಪಿಸುವಂತದ್ದರೆ ನಾನೆಂದೂ ನಗುತ್ತಲೇ ಇರುವೆನು.


                                               ಕಳೆಯಬೇಕು ನೂರು ವರುಷಗಳು,
                                              ಯೌವ್ವನದಿ, ಮುಪ್ಪಿನಲಿ ಕೂಡಿ ಸಾಗುತ್ತ..
                                              ಸಾಲು  ಸಾಲು ದೀಪಗಳ ಬೆಳಕನ್ನು,
                                              ಕಣ್ಣಿನಲಿ , ಹೃದಯದಲಿ , ಮನಸಿನಲಿ ಕಾಣುತ್ತ...
                                              ಅಲೆಗಳಾಗಿ ಬರುವ ಖುಷಿಯಲಿ, ಬೇಸರದಿ
                                              ಒಬ್ಬರಿಗೊಬ್ಬರಿಗೆ ಆಸರೆಯಾಗುತ್ತ..
                                             ಸೊಗಸಾದ ಮೌನದ ಗಳಿಗೆಯಲಿ
                                              ಪ್ರೀತಿಯಿಂದ ದಿಟ್ಟಿಸುತ್ತ ...
                                             ಬೆಳದಿಂಗಳಲಿ ಕೈಹಿಡಿದು
                                              ತುತ್ತನ್ನೊಂದು ತಿನ್ನಿಸುತ್ತ
                                             ಮಗದೊಮ್ಮೆ ಮತ್ತೊಮ್ಮೆ ಕಳೆಯಬೇಕು
                                               ನೂರು ವರುಷಗಳನು


 ಸಂಬಂಧಗಳೆಂದರೆ ಭದ್ರವಾಗಿರಬೇಕು.. ಚಿನ್ನಕ್ಕಿಂತಲೂ ಹೊಳಪಿರಬೇಕು.. ಚಿನ್ನವನ್ನು ಫಾಲಿಶ್ ಮಾಡಿದಂತೆ ಹೆಚ್ಚು ಹೆಚ್ಚು ಪ್ರೀತಿಗಳಿಂದ ಸಾಗುತ್ತಿರಬೇಕು.... ಯಾರು ಸರಿ ಯಾರು ತಪ್ಪೆಂಬ ವಾದಕ್ಕಿಂದ ಬದುಕನ್ನು ಪ್ರೀತಿಯಲಿ ತೇಲಿಸುವಂತೆ.. ಪ್ರತೀ ಮುಂಜಾವೂ ಅವನ ಮುಖ ನೋಡಿ ಪ್ರೀತಿಯೊಂದಿಗೆ ಆರಂಭವೇ ಆಗಬಹುದು..ತುಂತುರು ಮಳೆಗಳಲಿ ಒಂದೇ ಸಮನೆ ಎಂದೋ ಬರೆದಿಟ್ಟ ಪ್ರೀತಿಯ ಕವನವನ್ನು ಓದಿದಾಗ ಅವನಿಂದ ಭೇಷ್ ಎಂಬ ಪದಗಳಿಗೆ ಕೊರತೆಯಿರಬಾರದು..ಅವನ್ಯಾರೋ ಏನ್ ಮಾಡ್ತಾ ಇದ್ದಾನೋ ಇಷ್ಟು ಹೊತ್ತಿಗೆ.. ಅಂತ ಎಷ್ಟೋ ಸಲ ಯೋಚಿಸಿದ್ದೇನೆ..  ಪ್ರೀತಿಯ ಪತ್ರಗಳನ್ನೆಷ್ಟೋ ವಿಳಾಸವಿಲ್ಲದವನಿಗೆ, ಗೊತ್ತಿಲ್ಲದವನಿಗೆ ಬರೆದು ಭದ್ರವಾಗಿ ಇರಿಸಿದ್ದೇನೆ....ನಾನು ಒಬ್ಬಂಟಿ ಅಂತ ಯೋಚಿಸ್ತಾ ಇದ್ದಾಗ .ಬಹುಶಃ ನನಗಾಗಿ ಹುಟ್ಟಿದ ಅವನೂ ನನ್ನಂತೆಯೇ ಯೋಚಿಸುತ್ತ ಇರಬಹುದೇನೋ....

Thursday, September 26, 2013

ಬೆಳದಿಂಗಳಲ್ಲೊಂದು ಒಂಟಿತನ

ಅದೊಂದು ಸುಂದರ ಬೆಳದಿಂಗಳ ರಾತ್ರಿ... ತಂಪು ತಂಗಾಳಿ ಮನದಲಿ ಸೋಕುತ್ತಿರಲು ಕನಸುಗಳ ಪದಗುಚ್ಚವು ಕವಲೊಡೆದು ಬಂದಿತ್ತು...ನಕ್ಷತ್ರಗಳನ್ನು ಎಣಿಸುತ್ತ, ಎಣಿಸುತ್ತ ಚಂದಿರನ ನಗೆಯನ್ನು  ನೋಡುತ್ತಿದ್ದೆ...ಭಾವನೆಗಳ ಹೊಸ್ತಿಲು ನೆಲಕ್ಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ...ಆಗಲೇ ಕಾಡುವ  ಒಂಟಿತನ....ಅದೆಷ್ಟು ಅದ್ಭುತ ಎಂದರೆ ನನ್ನ ಮನಸ್ಸನ್ನು ನಾನೇ ಅರ್ಥಮಾಡಿಕೊಳ್ಳಲು, ಹೊಸ ಕನಸುಗಳಿಗೆ ಜಾಗ ಮಾಡಿಕೊಡಲು, ಒಬ್ಬಂಟಿಯಾಗಿ ಮಾತ್ರ ಆ ಜಗಕ್ಕೆ ಹೋಗಲು ಸಾಧ್ಯ..ಓ ಕನಸುಗಳೇ ನೀವೆಂದು ನನಸಾಗಿರುವಿರೆಂದು ಕೇಳುವುದು ನನ್ನ ಒಂಟಿತನದಲ್ಲಿಯೆ.....ಯಾಕೋ ಏನೋ ಆ ಬೆಳದಿಂಗಳ ರಾತ್ರಿಯಲಿ ಚಂದಿರನಿಗಿಂತಲೂ ನನ್ನ ಕನಸುಗಳೇ ಸುಂದರವಾಗಿ ಕಂಡಿದ್ದವು..ಚಂದಿರನ ಜೊತೆಗೆ ನನ್ನ ಕನಸುಗಳನ್ನು ಹೋಲಿಸಿಕೊಳ್ಳುತ್ತ  ಒಬ್ಬಳೇ ಕೂತುಬಿಟ್ಟೆ....ರಾಯರು ಬಂದರು ಹಾಡೇಕೋ ನೆನಪಾಗುತ್ತಿತ್ತು..ಮುಂಬಾಳ ಸವಿಗನಸನು ಹೆಣೆಯಲು ಆ ಚಂದ್ರನೂ ನಸುನಕ್ಕು ಬೆಳಕನ್ನು ಹರಿಸಿದನು..

.ಅದೇ ಬೆರಗಾಗಿ ಸಾಗಿದಷ್ಟು ದೂರ ದೂರ ಕಂಗಳು ಮಿಟಿಮಿಟಿಸುತ್ತಿತ್ತು..ಒಂದು ಕವನವನ್ನು ಬರೆಯೋಣವೆಂದರೆ ಪದಗಳ ಮಿತಿಯೇ ತಾಕದಲ್ಲ.ಕೆಲವೊಂದು ದಿನವೇ ಅಷ್ಟು ಸುಂದರವಾಗಿರುತ್ತೆ..ಕಾರಣವೇನೆಂದು ಗೊತ್ತಿರುವುದಿಲ್ಲ..ಆದರೆ ಭಾವಗಳು ಎದ್ದು ಓಡಾಡುತ್ತಿರುತ್ತವೆ. ಸಣ್ಣಗೆ ಬೀಳುತ್ತಿದ್ದ ತುಂತುರು ಮಳೆಗೆ ಸಾಟಿಯಾಗುವೆಯೇನೋ ಎಂಬಂತೆ ''ತುಂತುರು ಅಲ್ಲಿ ನೀರ ಹಾಡು ಕಂಪನಾ ಇಲ್ಲಿ ಪ್ರೀತಿ ಹಾಡು'' ಎಂಬ ಹಾಡನ್ನು ಗುನಿಗುನಿಸುತ್ತಿತ್ತು ಮನಸ್ಸು..ಮಿಂಚಿನ ಒಂದು ಬೆಳಕು ಮನದಲ್ಲಿ ಸುಳಿಯದಿದ್ದರೂ ದೂರದಿಂದಲೇ ನೋಡಿ ಖುಷಿಪಡುವಂತೆ ಮಾಡಿತ್ತು.ಒಂಟಿತನವೆಂಬುದು ಮನಸ್ಸನ್ನು ಹಾಡಿಸಿ, ಕೇಳಿಸಿ ಎಂದೋ ಓದಿದ ಸರ್ದಾಜಿಯ ಜೋಕನ್ನು ನೆನಪು ಮಾಡಿಸಿ ದೊಡ್ಡದಾಗಿ ಒಬ್ಬಳೇ ನಗುವಂತೆ ಮಾಡಿತ್ತು...ಒಂಟಿತನದ ಸೋನೆ ಮಳೆಯು ಹೃದಯವು ಒದ್ದೆಯಾಗದಂತೇ ತಡೆದು, ಅಮ್ಮ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ ಎಂದು ದಾರಿಹೋಕರ ಮೊಬೈಲ್ ನಿಂದ ಮತ್ತೊಂದು ಪದ್ಯ ಕೇಳಿದೊಡನೆ, ಬೆಳಕು ಶುಭ್ರವಾಗಿ ಮುಖದ ಮೇಲೆಯೇ ಬಿದ್ದಿತು.

ಸಮಯ ಇನ್ನು ಹತ್ತಾದರೂ ನೆಚ್ಚಿತೊಂದು ಬೆಟ್ಟದ ಕನಸುಗಳು, ಬೇಕುಬೇಡಗಳು, ಕಷ್ಟ ಸುಖಗಳೆಲ್ಲ ಸೇರಿ ಅದೇನೋ ಹೊಸ ರೂಪ..ಎಲ್ಲರೂ ಹೆದರುವ ಒಂಟಿತನದಲ್ಲಿ ಇಷ್ಟೊಂದು ಹಿತವಿದೆಯಾ? ಎಂದು ಆ ಸಮಯಕೆ ತೋಚದಿರಲಿಲ್ಲ..ಎಲ್ಲರೂ ಬೇಡ ವೆಂದು ದೂಡುತ್ತ ಕಳುಹಿಸುವ  ಒಂಟಿತನಕ್ಕೂ ತನ್ನದೇ ಆದ ಭಾವಗಳಿವೆ, ಮನಸುಗಳನು ಓದುವ ಸಾಮರ್ಥ್ಯವಿದೆ..ಎಷ್ಟೋ ಆಗದಿರುವ ಕೆಲಸವನ್ನು ಯೋಚಿಸಿ ಪೂರ್ಣಗೊಳಿಸುವ ಅದ್ಭುತ ಶಕ್ತಿಯಿದೆ..

ಆದರೆ ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕಷ್ಟೆ..ಕೆಲವೊಂದು ಬಾರಿ ಅನಿಸುವುದು ಬೇಸರವೆಂದರೆ ನಮ್ಮ ಮನದ ಯೋಚನೆಗಳು ಋಣಾತ್ಮಕವಾಗಿ ಹರಿದಾಗ..ಆದರೆ  ಸ್ನೇಹ, ಪ್ರೀತಿ, ವಿಶ್ವಾಸದ ಸುಖದಲ್ಲಿ ಪ್ರೀತಿ ಪಾತ್ರದವರೆಡೆ ಯೋಚಿಸಲು ಸಮಯವನ್ನು ಮೀಸಲಿರಸಬೇಕೆಂದರೆ  ಅದು ಒಂಟಿತನದಲ್ಲಿಯೇ....


Tuesday, June 04, 2013

ನೀನಾಗುವೆಯಾ..?

ಬಣ್ಣವಾಗಿ ಜೀವ ತುಂಬುವೆಯಾ

ನನ್ನ ಮದರಂಗಿ ಚಿತ್ರಕೆ..

ಬೆಳಗಿನ ಕನಸಿನಲಿ ಬಂದು ತಟ್ಟಿ

ಎಬ್ಬಿಸಿ ಪ್ರೀತಿಯಿಂದ ಕರೆಯುವೆಯಾ...

ಮುಸ್ಸಂಜೆಯ ತಂಗಾಳಿಯಲಿ ಬೆಚ್ಚನೆಯ

ಕನಸುಗಳನು ನನ್ನಲ್ಲಿ ಕಾಣುವೆಯಾ..

ಜನುಮ ದಿನದಂದು ಶುಭಾಶಯ ತಿಳಿಸುವ ಮೊದಲಿಗ

ನೀನಾಗುವೆಯಾ...

ಹೊಳೆಯುವ ಉಂಗುರದ ಶುಭ್ರ

ಹರಳು ನೀನಾಗುವೆಯಾ...

ತುಟಿಯಂಚಿನಲ್ಲಿ ಬರುವ ನಗುವಿನ

ಸೌಧವಾಗುವೆಯಾ..

ಅತ್ತಾಗ ಒಲವಿನ ಲೋಕಕ್ಕೆ  ಕರೆದೊಯ್ದು

ಸಾಂತ್ವನ ಹೇಳುವೆಯಾ..

ಬಚ್ಚಿಟ್ಟ ಆಸೆಗಳಿಗೆ ಸೂತ್ರವನು ಕಟ್ಟಿ

ಆಗಸದೆತ್ತರಕೆ ಹಾರಿಸುವೆಯಾ..

ನನ್ನ ಪಾಲಿಗೆ ಎಲ್ಲವೂ ನೀನೇ

ಆಗುವೆಯೆಂದು...??


Wednesday, February 20, 2013

ಅದೇಗೆ ಕಳೆಯಿತೋ....


ಇನ್ನು ಸ್ವಲ್ಪ ದಿನಗಳು ಮಾತ್ರ.. ಈ ಕಾಲೇಜ್ ಬಿಟ್ಟು ಹೋಗ್ತೀರಾ ಬೇಜಾರಾಗ್ತಾ ಇದ್ಯಾ ? ಅಥವಾ ಖುಷಿ ಆಗ್ತಾ ಇದೆಯಾ?
ಎಂದು ಆ ಕ್ಲಾಸಿನಲ್ಲಿ ಉಪನ್ಯಾಸಕರು ಎಲ್ಲರಲ್ಲಿಯೂ  ಕೇಳಿದಾಗ ಉತ್ತರವೇ ಬಂದಿರಲಿಲ್ಲ..ಬದಲಿಗೆ ನೆನಪುಗಳ ಲೋಕಕ್ಕೆ ಪಯಣಿಸಿದ್ದೆ....
ಮೂರು ವರುಷಗಳ ಹಿಂದಿನ ಮಾತು ಆಗ ತಾನೇ ಶಿರಸಿಯಲ್ಲಿ ಪಿ.ಯು.ಸಿ ಮುಗಿಸಿದ ನನಗೆ   ಮುಂದೆಲ್ಲಿ ಎಂಬ ಪ್ರಶ್ನೆ ಕಾಡಿತ್ತು..ಅಪ್ಪ ಹತ್ತಿರ  ಕರೆದು ಉಜಿರೆಗೆ ಹೋಗು ಎಂದಾಗ ಮುಖ ಸೊಟ್ಟಗಾಗಿತ್ತು..ಏಕೆಂದರೆ ನನ್ನಲ್ಲಿ ಉಜಿರೆ ಎಂದರೆ ಕೇವಲ ಸ್ಟ್ರಿಕ್ಟ್, ಮನೆಯಿಂದ ದೂರ ಮತ್ತು ಸೆಕೆ ಜಾಸ್ತಿ  ಎಂಬ ಭಾವನೆಯಿತ್ತು.. ಮನೆಯಲ್ಲೆಲ್ಲ ಇಡೀ ದಿನವೂ  ಅದರ ಬಗ್ಗೆಯೇ ಮೀಟಿಂಗು.."ನಿಂಗೋ ಎಷ್ಟ್ ಹೇಳಿದ್ರೂ ಅಷ್ಟೆ ನಾ ಅಂತೂ ಹೋಗ್ತ್ನಿಲ್ಲೆ"
 ಎಂಬ ನನ್ನ  ವಾದದ ಕಡೆಗೆ ಅಮ್ಮನೂ ಇದ್ದಳು..ಯಾವಾಗಲೂ ನನ್ನ ಬೇಕು ಬೇಡಗಳನ್ನು , ನನ್ನ ಆ ಸೆಗಳನ್ನು ಎಲ್ಲವನ್ನೂ ಖುಷಿಯಿಂದಲೇ ನಾ ಹೇಳಿದಂತೆಯೇ  ಕೇಳುತ್ತಿದ್ದ ಅಪ್ಪನು ಉಜಿರೆಗೆ ಹೋಗುವ ವಿಷಯದಲ್ಲಿ ಮಾತ್ರ  ಸ್ಟ್ರಿಕ್ಟ್ ಆಗಿ ಕೂತಿದ್ದ..
ಅಂತೂ ಅಣ್ಣನ ಜೊತೆಗೆ ಉಜಿರೆಯ ಕಡೆಗೆ ಪ್ರಯಾಣ ಬೆಳೆಸಿದೆ ..ಉಡುಪಿಯ ವರೆಗೆ ಮಾತ್ರ ತಲುಪಿದ್ದೆವು.. ಇನ್ನೂ ಮೂರು ತಾಸುಗಳಂತೆ ಉಜಿರೆಗೆ ಎಂದಾಗ ವಾಪಸ್ಸು ಮನೆಗೆ ಹೋಗೋಣ ಎನ್ನಲು ಶುರು ಮಾಡಿದೆ ನಾನು... ಪ್ರೀತಿಯ ಮಾತುಗಳಿಂದ ಅಣ್ಣನು ಉಜಿರೆಗೂ ತಲುಪಿಸಿದ.. ಕಾಲೇಜಿಗೆ  ತಲುಪಿದ ಕೂಡಲೇ ಸ್ಥಳದಲ್ಲಿಯೇ ಅಡ್ಮಿಷನ್ ಸಿಕ್ಕಿತ್ತು..ಅದನ್ನೂ ಮಾಡಿಸಿದ ಅಣ್ಣ..
ಮನೆಗೆ ಹಿಂತಿರುಗಿದಾಗ ಅಪ್ಪನ ಮುಖದಲ್ಲಿ ಖುಷಿಯಿತ್ತು.." ಪಾಪ ನಮ್ಮನೆ ತಂಗಿ ಹತ್ರ  ಮೊಬೈಲ್ ಇಲ್ಲೆ  ನಾ ಹೆಂಗಿದ್ದ ಬೇಕಾದ್ರೂ ತೆಗೆಸಿ ಕೊಡ್ತೆ ನನ್ನ ಬಂಗಾರ " ಎಂದೆಲ್ಲಾ ನನ್ನನ್ನು ಖುಷಿ ಪಡಿಸಲು ಪ್ರಯತ್ನಿಸಿದರೂ ನನ್ನ ಮುಖದಲ್ಲಿ ನಗೆಯು ಬಂದಿರಲಿಲ್ಲ.. ಅಮ್ಮನ ತೋಳಿನಲ್ಲಿ ಅತ್ತು ಬಿಟ್ಟಿದ್ದೆ..."ನಿಂಗೆ ಮನೆ ಬೇಜಾರ್ ಬಂದ್ರೆ ಒಂದು ಫೋನ್ ಮಾಡು ನಂಗೋ ಇಬ್ರೂ ಅಲ್ಲಿ ಒಂದು ದಿನದಲ್ಲೇ ಬತ್ಯೋ" ಎಂದಾಗ ಸ್ವಲ್ಪ ಖುಷಿಯಾಯಿತು..ಅಂತೂ ಹೊರಟೆ..
ಅಂದು ಕಾಲೇಜಿನ ಮೊದಲನೇ ದಿನ ಜೊತೆಗೆ ನನ್ನ ಜನುಮದಿನ...ಗೊತ್ತಿಲ್ಲದ ಕಾಲೇಜಿನಲ್ಲಿ ಶುಭಾಷಯ ಹೇಳುವವರು ಯಾರೂ ಇರಲಿಲ್ಲ..ಆದರೂ ಸಂಭ್ರಮವಿತ್ತು ಕೆಲವೇ ದಿನಗಳಲ್ಲಿ ಆ ಪರಿಸರಕ್ಕೆ ಹೊಂದಿಕೊಂಡು ಬಿಟ್ಟಿದ್ದೆ..ಐಡಿ ಕಾರ್ಡಿನ ಮೇಲೇ ವ್ಯಾಲಿಡಿಟಿಯನ್ನು ನೋಡುತ್ತ ದೇವ್ರೇ ಇನ್ನೂ ಮೂರು ವರುಷಗಳು ಇಲ್ಲೇ ಇರ್ಬೇಕಾ! ಎಂದೆನ್ನಿಸುತ್ತದ್ದರೂ ಬಹು ಬೇಗ ಹೊಂದಿಕೊಂಡಿದ್ದೆ..
ಆಗ ನಾನು ಅದೆಷ್ಟು ಮುಗ್ಧಳಾಗಿದ್ದೆಯೆಂದರೆ ಯಲ್ಲಾಪುರದವರು ಉಜಿರೆಯಲ್ಲಿ ಯಾರಾದ್ರೂ ಇದ್ರೆ ಸಾಕು ಗೊತ್ತಿಲ್ದೇ ಇದ್ರೂ ಹೋಗಿ ಮಾತನಾಡಿಸುತ್ತಿದ್ದೆ...ನನ್ನ ರೂಂಮೇಟ್ ಇದೇ ಕಾರಣಕ್ಕೆ ಯಾವಾಗಲೂ ಹೇಳ್ತಾ ಇರ್ತಿದ್ಲು.."ಏನೇ ಯಲ್ಲಾಪುರದ್ದೇನಾದ್ರೂ ಸಂಘ ಶುರು ಮಾಡ್ತೀಯ ಹೆಂಗೆ" ಎಂದು..  ಪ್ರತೀ ರಜಾದಿನಗಳಲ್ಲಿ ಧರ್ಮಸ್ಥಳ  ಮಂಜುನಾಥನ ದರ್ಶನಕ್ಕೆ ಹೋಗುತ್ತಿದ್ದೆವು..ಕ್ಲಾಸಿನಲ್ಲಿ ಚುಕ್ಕಿ ಆಟ ಆಡುತ್ತಿದ್ದ ಸಂಭ್ರಮವಂತೂ ಹೇಳತೀರದು..
ಮೂರು ವರುಷಗಳು ಅದೇಗೆ ಕಳೆಯಿತೋ ...ಒಂದೂ ಗೊತ್ತಿಲ್ಲ ..ದಿನಗಳು ಯಾರಿಗೂ ಕಾಯದೇ ಕಳೆದುಬಿಡುತ್ತವೆ...
ಮತ್ತದೇ ಪ್ರಶ್ನೆ ಮುಂದೇನು? ಎಂಬುದು....
ಕಾಲ,ಸಮಯ, ದಿನಗಳು ಒಂದೊಂದಾಗಿ ಉರುಳುತ್ತ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಾಡುತ್ತೆ..ಮೊದಲು ಅದೇಗೆ ಇಲ್ಲಿರಬೇಕೋ..ಎಂದುಕೊಂಡರೂ ನಂತರದ ದಿನಗಳು ಇಲ್ಲಿಂದ ಬಿಟ್ಟು ಹೋಗಬೇಕಲ್ಲ ಎಂಬ ಬೇಸರ..
ನಮ್ಮೊಳಗೇ ಇದ್ದ ಚಿಕ್ಕಪುಟ್ಟ ಖುಷಿಗಳು, ಬೇಸರಗಳು, ಸಾಂತ್ವನದ ಮಾತುಗಳು ಖುಷಿಯನ್ನು, ಬೇಸರವನ್ನು ತಂದುಕೊಂಡುತ್ತೆ..
ಎಲ್ಲದಕ್ಕೂ ಕಾರಣ ಮನಸ್ಸೇ....ಅದೇಕೋ ಒಂದು ರೀತಿಯ ಬೇಸರ ಜಿರೆಯನ್ನು ಬಿಟ್ಟು ಹೋಗಬೇಕಲ್ಲಾ ಎಂದು...

Monday, December 17, 2012

ಬದುಕಿನ ಬದುಕು ನೀ..........

  ನನ್ನೊಲವ ದಾರಿಯಲಿ ಬರಬೇಕೆನ್ನುವ

 ಪ್ರೀತಿಯ   ಹೆಜ್ಜೆಗಳಲಿ

ನೀನೆಂದು ಬಂದು ಸಾಗುವೆ

ಕಣ್ಣಿನಲಿ ಕಣ್ಣಂತೆ ಕಾಯುತಿರುವ

ಮನಸು ಕನಸುಗಳ

ಪಿಸುಮಾತುಗಳು.....

ನನ್ನ ಮನವು ಇಂದಿಗೂ ಎಂದಿಗೂ

ಹೇಳುತಿದೆ  ಕನಸುಗಳು

ನನಸಾಗುವಂತಿದ್ದರೆ

ನಿನ್ನ ಜೊತೆಗೇ ಎಷ್ಟು ಸುಂದರವೆಂದು,

ನೀ ಕಟ್ಟುವ ಪ್ರೀತಿ ಸೌಧದಲಿ

ನನಗೆ ಜಾಗವಿದೆಯೆಂದರೆ

ಕಟ್ಟೋಣ ಬದುಕನ್ನೂ....

ಕಣ್ಣಿನ ಕ್ಯಾಮರಾದಲಿ ತೆಗೆದ

ಫೋಟೋವನ್ನು ಹೃದಯದಲಿ

ಕಟ್ಟಿಸಿಡಲೇ ..

ನೀ ಹಣತೆ ಹಚ್ಚುವೆಯಾದರೆ

ಅದರ ಬೆಳಕು ನಾನುಗುವೆ ನಿನಗೆ

ದಾರಿಯುದ್ದಕ್ಕೂ ಎಂದಿಗೂ

ಕೊನೆಯವರೆಗೂ ...

ಖಾಲಿಯಾಗದ ಒಂದಷ್ಟು ಭಾವನೆಗಳ

ಲೋಕದಲಿ

ನಾನು ನೀನು ಮಾತ್ರ..

ಬದುಕಿನಲ್ಲಿಯ ಬದುಕು ನೀನು.

Tuesday, December 11, 2012

ಪರಿಹಾರವಿಲ್ಲವೇ??

ಹಗಲು ಅಮವಾಸ್ಯೆ ಕವಿದ
ಬದುಕಿನ ಆಗಸದಲಿ
ಒಂದುಹೊತ್ತಿನ ಅನ್ನಕ್ಕಾಗಿ ಪರದಾಡುವ ,
ಯಾರದ್ದೋ ಮನೆಯ ಪಾತ್ರೆ ತೊಳೆದು
ದುಡಿಯುವಳು ಆಕೆ ತನ್ನವರಿಗಾಗಿ
ಒಂದೆಡೆ ಭೃಷ್ಟಾಚಾರದ ನಾಟ್ಯವಾದರೆ
ಇನ್ನೊಂದೆಡೆ ಬಡತನದ ಬೇಗೆ
ರೋಗ ರುಜಿನಗಳ ಕೊರತೆ
ಎಂದೂ ವಾಸಿಯಾಗದ ಗಾಯದ ಕಲೆಗಳು
ಹಸಿವಿನಿಂದ ಬಳಲಿದ ಜೀವಕೆ
ವಿಟಮಿನ್ ಕೊರತೆಯೆಂದರು ವೈದ್ಯರು,
ಕುಡಿತಕ್ಕಾಗಿ ಹಣ ಬೇಕೆಂದು
ಹೊಡೆಯುವ ಗಂಡ ಒಂದೆಡೆಯಾದರೆ
ಚಾಕಲೇಟ್ ಕೊಡಿಸಮ್ಮ  ಎಂದು ಅಳುವ ಕಂದಮ್ಮಗಳು
ಏನಾದರೂ ಸಹಾಯ ಮಾಡಿ ಎಂದು ಬೇಡಿದರೆ
ನೋಡಿ ನಗುವವರು ಬಿಟ್ಟರೆ
ಕೇಳುವವರು ಯಾರು??
ಅಪರೂಪದ ಖಾಯಿಲೆಗೆ
ಬೆಟ್ಟದ ಸೊಪ್ಪೇ ಔಷಧ
ಸಂಕವಿಲ್ಲದ ಹಳ್ಳವ ದಾಟಿ ಹೋಗಬೇಕು
ಚಪ್ಪಲಿಗಳಿಲ್ಲದ ಕಾಲಿಗೆ ಮುಳ್ಳು ಚುಚ್ಚಿದರೆ ಕೇಳುವವರಿಲ್ಲ
ಜೋರು ಮಳೆ ಬಂದರೆ ಹಾರಿ ಹೋಗುವ ಮನೆ
ಪ್ರತೀ ಕ್ಷಣವೂ ಬಡತನದ ಚಿಂತೆ
 ಹೇಗೆ ದುಡಿಯಲಿ ಎಂದು ಚಿಂತಿಸುವುದರೊಳಗೆ ಮಾನಸಿಕ ಕಿರುಕುಳ
ಅವಳಿಗೂ ಮನಸು, ಕನಸು ಎಲ್ಲವೂ ಇದ್ದು
ಅರ್ಥ ಮಾಡಿಕೊಂಡ ಹೃದಯವಿಲ್ಲ
ಅಡಗಿರುವ ಅವ್ಯಕ್ತ ಭಾವನೆಗಳಿಗೆ
ಉತ್ತರವೆಂದೂ ಸಿಗಬಹುದೇ?
ಅಮವಾಸ್ಯೆ ಕಳೆದು ಒಂದು ಚೂರಾದರೂ ಬೆಳಕು
ಹರಿದರೆ ಎಂಬ ಆಶಯ
ಎಂದು ಸಿಗಬಹುದು ಪ್ರಪಂಚದಲ್ಲಿರುವ  ಬಡವರಿಗೆ
ಪರಿಹಾರ??
ಮಕ್ಕಳಿಗೆ ಸರಿಯಾದ ಉಪಹಾರ?
ಹತಾಶೆ ನೋವು ಬದುಕು ಒಡ್ಡಿದ ಪರೀಕ್ಷೆಗೆ
ಎಂದೂ ಕಾಯುತ್ತಿರಬೇಕೆ?