ಜೀವನಾ ಹೇಗಿದೆ ಎಂಬ ಪ್ರಶ್ನೆಗೆ ಎಷ್ಟೋ ಸಲ ಬರುವ ಉತ್ತರ ಬೋರಿಂಗ್ ಎಂದು.. ಕಾರಣವೇನೆಂದು ಯಾರಿಗೂ ತಿಳಿದಿಲ್ಲ..ನಮಗೆ ನಾವೇ ಬೋರ್ ಆಗಿಬಿಟ್ಟಿದ್ದೇವಾ? ನಮ್ಮೊಳಗಿನ ಕನಸುಗಳು, ನಾಳಿನ ಭರವಸೆಗಳು, ಏನನ್ನಾದರೂ ಸಾಧಿಸಲೇಬೇಂಬ ಛಲವೆಲ್ಲ ಏನಾಯಿತು..ಅಯ್ಯೋ ಲೈಫ್ ತುಂಬಾ ಬೋರು ಎಂಬ ಮಾತಿಗಿಳಿಯುವ ಮೊದಲು ಯಾಕೆ ಬೋರ್ ಆಗ್ತಾ ಇದೆ..ಎಲ್ಲವೂ ನಮ್ಮಿಷ್ಟದಂತೆಯೇ ನಡೆಯುತ್ತಿದೆ ಆದರೂ ಬೋರಿಂಗ್ ಎಂದರೆ ಕಾರಣ ಇದಕ್ಕೆ ನಾವೇ ಹೊರತು ಬೇರೆಯವರ್ಯಾರೂ ಪರಿಹಾರ ಕೊಡಲು ಸಾಧ್ಯವಿಲ್ಲ..ಜಗತ್ತಿನಲ್ಲಿರುವ ಜನರೆಲ್ಲ ಸಲಹೆಗಳನ್ನು ಕೊಡಬಲ್ಲರು ಆದರೆ ನಮ್ಮ ಮನಸ್ಸಿಗೆ ಅರ್ಥಮಾಡಿಸಿಕೊಳ್ಳುವವರು ನಾವೊಬ್ಬರೇ.. ಬದುಕಿನ ನಿರ್ಧಾರಗಳನ್ನು ತೆಗೆದುಕೊಳ್ಳುವುದು ನಾವೇ ಆಗಿರುತ್ತೇವೆ..
ಅವರೇ ಆಯ್ದುಕೊಂಡ ಅವರಿಷ್ಟದ ಸಬ್ಜೆಕ್ಟ್ , ಇಂತಹ ವೃತ್ತಿಗೇ ಹೋಗಬೇಕೆಂದು ಅವರಿಷ್ಟದ ಕೆಲಸವನ್ನೇ ಆಯ್ದುಕೊಂಡಿರುತ್ತಾರೆ..ಹುಚ್ಚುಕೋಡಿ ಮನಸಿಗೆ ಕಡಿವಾಣ ಹಾಕಿಕೊಳ್ಳಬೇಕಾದ ಅವಶ್ಯಕತೆ ಇದೆಯೋ, ಅಥವಾ ಅನಿವಾರ್ಯತೆ ಇದೆಯೋ ಗೊತ್ತಿಲ್ಲ.. ಆದರೆ ಜೀವನದ ಪ್ರತೀಯೊಂದು ಕೆಲಸದಲ್ಲೂ, ಪ್ರತೀಯೊಂದು ಕ್ಷಣದಲ್ಲೂ ಖುಷಿಯಾಗಿರಬೇಕೆಂಬುದು ಎಲ್ಲರ ಹಂಬಲ..ಯಾರಾದರೂ ಪ್ರೀತಿಯಿಂದ ಮಾತನಾಡಿಸಿದಾಗ ಎಲ್ಲೋ ಒಂದು ಕಡೆ ಸಂತಸವೆಂಬ ಬೆಳಕಿನ ಕಿರಣವು ಹರಿಯುತ್ತದೆ..
ಪ್ರತೀ ಕತ್ತಲೂ ಸೂರ್ಯೋದಯಕ್ಕಾಗಿ ಕಾಯುತ್ತಿರುತ್ತದೆ. ಬದುಕಿನ ಪ್ರತೀಯೊಂದು ತಿರುವಿನಲ್ಲೂ ಒಂದೊಂದು ಕಾಲುದಾರಿಯನ್ನಾದರೂ ಹುಡುಕುತ್ತ ಸಾಗಲೇಬೇಕು. ಇಷ್ಟವೋ, ಕಷ್ಟವೋ, ಅನಿವಾರ್ಯವೋ ಆಯ್ದುಕೊಂಡಿರುವ ಕೆಲಸವನ್ನು ಪ್ರೀತಿಯಿಂದ ಮಾಡಲೇಬೇಕಲ್ಲವೇ? ಹಾಸಿಗೆ ಇದ್ದಷ್ಟು ಕಾಲು ಚಾಚು ಎನ್ನುವುದಕ್ಕಿಂತ, ಕಾಲು ಚಾಚುವಷ್ಟು ಉದ್ದದ ಹಾಸಿಗೆಯನ್ನೇ ಮಾಡಿಕೊಳ್ಳುವೆ ಎಂಬುವುದು ಜಾಣತನ.
ಎಲ್ಲವೂ ಮನಸ್ಸಿಗೆ ಸಂಬಂಧಿಸಿದ್ದು.. ಪ್ರಾನ್ಸ್ ನಲ್ಲೊಬ್ಬ ಮನೋವಿಜ್ಷಾನಿ ಇಮಾಯಿಲ್ ಕುವೇ ಎಂಬುವವನು ರೋಗಿಗಳಿಗೆ ಸಕಾರಾತ್ಮಕ ಮನೋಭಾವವನ್ನು ತುಂಬಿಸಿ ಲಕ್ಷಾಂತರ ಜನರನ್ನು ಗುಣಪಡಿಸಿದ್ದನಂತೆ.. ''ನಾನು ಆರೋಗ್ಯವಾಗಿರುವೆ. ನನ್ನ ಆರೋಗ್ಯ ಸುಧಾರಿಸುತ್ತದೆ, ಎಂದು ಮನಸ್ಸಿಗೆ ಮತ್ತೆ ಮತ್ತೆ ಹೇಳಿಕೊಳ್ಳಬೇಕೆಂದು , ಪ್ರತೀದಿನ ರಾತ್ರಿ ಮಲಗುವ ಮುಂಚೆ ಅದೇ ಯೋಚನೆಯಲ್ಲಿ ಮಲಗಬೇಕು" ಎಂದು ಹೇಳುತ್ತಿದ್ದನಂತೆ..ಇಂತಹ ಸಕಾರಾತ್ಮಕ ಮನಸ್ಸಿನ ಸ್ಥಿತಿಯು ಮತ್ತಷ್ಟು ವರುಷಗಳು ಸಂತಸವನ್ನು ತಂದುಕೊಡಬಲ್ಲುದು..
ಪ್ರತೀ ಬೋರಿಂಗ್ ಎಂಬ ಹೇಳಿಕೆಯ ಸುತ್ತಲೇ ಎಂಜಾಯ್ ಎಂಬ ಪದವು ಸುತ್ತುತ್ತಿರುತ್ತೆ.. ಆದರೆ ನಮ್ಮ ಭಾವನೆಗಳು ಮಾತ್ರ ಯಾವುದೋ ಒಂದಕ್ಕೆ ಅಂಟಿಕೊಂಡು ಒದ್ದಾಡುತ್ತಿರುತ್ತದೆ..ಖುಷಿಯ ಚಿಲುಮೆಯನು, ಸಕಾರಾತ್ಮಕವಾದ ಭಾವಗಳನ್ನು ನಮಗೆ ನಾವೇ ಸೃಷ್ಟಿಸಿಕೊಳ್ಳಬೇಕು..